ಭಾನುವಾರ, ಜೂನ್ 20, 2021
28 °C
ಕಾಳಜಿ

ನಾವೂ ಕೂರಬೇಕು ಸ್ವಾಮೀ...

ಕಾವ್ಯ ಸಮತಳ Updated:

ಅಕ್ಷರ ಗಾತ್ರ : | |

1. ಬೆಳಿಗ್ಗೆಯಿಂದ ಸಂಜೆವರೆಗೂ ನಿಂತೇ ಕೆಲಸ ಮಾಡಬೇಕು. ಊಟಕ್ಕೆ 30 ನಿಮಿಷ ವಿರಾಮವಿರುತ್ತದೆ. ಆದರೆ ಕೆಲಸ ಹೆಚ್ಚಿದ್ದಾಗ ಊಟದ ಸಮಯವನ್ನು 30ರಿಂದ 15 ನಿಮಿಷಕ್ಕೆ ಮೊಟಕುಗೊಳಿಸುತ್ತಾರೆ. ಮುಟ್ಟಿನ ಸಮಯದಲ್ಲಿ ನಿಲ್ಲಲು ಕಷ್ಟ. ಪದೇ ಪದೇ ಶೌಚಾಲಯಕ್ಕೆ ಹೋಗುತ್ತಿದ್ದರೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ನೋಡುವ ಮೇಲ್ವಿಚಾರಕರು ಕರೆದು ಬೈಯ್ಯುತ್ತಾರೆ. ಕೆಲಸ ಮುಗಿಸಿ ಮನೆಗೆ ಹೋಗುವಷ್ಟರಲ್ಲಿ ಜೀವನ ಹೈರಾಣವಾಗಿರುತ್ತದೆ– ಇದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಅಳಲು.  

2. ನನ್ನದು ಪಾಳಿ ಕೆಲಸ. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗಿನ ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತೇನೆ. ಊಟಕ್ಕೆ 25 ನಿಮಿಷ ಮತ್ತು ಎರಡು ಗಂಟೆಗೊಮ್ಮೆ ಶೌಚಾಲಯಕ್ಕೆ ಅಂತ 10 ನಿಮಿಷ ವಿರಾಮವಿರತ್ತೆ. ಉಳಿದ ಎಲ್ಲಾ ಸಮಯ ನಿಂತೇ ಇರಬೇಕು. ಓಡಾಡುತ್ತಾ ಕೆಲಸ ಮಾಡಬಹುದು. ಆದರೆ ಎಲ್ಲಿಯೂ ಕೂರುವ ಹಾಗಿಲ್ಲ. ಒರಗಿಕೊಳ್ಳುವಂತೆಯೂ ಇಲ್ಲ. ಊಟ ಮುಗಿಸಿ 5 ನಿಮಿಷ ತಡವಾಗಿ ಬಂದರೂ ಮೇಲಧಿಕಾರಿಗಳಿಗೆ ದೂರು ಹೋಗಿರುತ್ತದೆ. ಆರೋಗ್ಯ ಸರಿಯಿಲ್ಲ, ಸುಸ್ತು ಇವೆಲ್ಲಾ ಹೇಳಲು ಇಲ್ಲಿ ಅವಕಾಶವಿಲ್ಲ. ತುಂಬಾ ಸುಸ್ತಾಗಿದ್ದಾಗ ಮೇಲಧಿಕಾರಿಗಳನ್ನು ಬೇಡಿಕೊಂಡರೆ ಕೆಳಗಡೆ ಕಾರ್‌ ಪಾರ್ಕಿಂಗ್‌ನಲ್ಲಿ ಕೆಲಸಕ್ಕೆ ಹಾಕುತ್ತಾರೆ. ಅಲ್ಲಾದರೆ ಒರಗಿಕೊಳ್ಳಲು ಅವಕಾಶ ಸಿಗುತ್ತದೆ ಎನ್ನುವುದಷ್ಟೆ ನೆಮ್ಮದಿ– ಇದು ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರ ಅಳಲು.

3. ಹೊಟ್ಟೆಬಟ್ಟೆ ಕಟ್ಟಿ ಅಪ್ಪ ಅಮ್ಮ ನನ್ನ ಓದಿಸಿದ್ರು. ಪದವಿ ಮುಗಿತು. ಆದರೆ ಓದಿಗೆ ತಕ್ಕ ಕೆಲಸ ಮಾತ್ರ ಸಿಕ್ಕಿರಲಿಲ್ಲ. ಒಂದು ವರ್ಷದಿಂದ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆವರೆಗೆ ನನ್ನ ಕೆಲಸ. ಇಲ್ಲಿ ಬಿಲ್ಲಿಂಗ್‌ ಇಂದ ಆರಂಭಗೊಂಡು ಸೆಕ್ಯುರಿಟಿ ಗಾರ್ಡ್‌ವರೆಗೆ ಎಲ್ಲರೂ ನಿಂತೇ ಇರುತ್ತಾರೆ. ಊಟಕ್ಕೆ 30 ನಿಮಿಷದ ವಿರಾಮವಷ್ಟೆ. ಉಳಿದಂತೆ ನಿಂತೇ ಇರಬೇಕು. ಮೊದಲ ಒಂದು ವಾರ ನೋವು ಅನ್ನಿಸಿತು. ನಂತರದಲ್ಲಿ ಉದ್ಯೋಗದ ಅನಿವಾರ್ಯತೆ ನೋವಿಗಿಂತ ದೊಡ್ಡದೇನಲ್ಲ ಎನಿಸತೊಡಗಿತು– ಇದು ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಕುಮಾರ್‌ ಅವರ ನೋವಿನ ಮಾತು...

ಇವು ದಣಿವರಿಯದೇ ದುಡಿಯುತ್ತಿರುವ ಕ್ಷೇತ್ರಗಳ ಕಾರ್ಮಿಕರ ಪ್ರಾತಿನಿಧಿಕ ಮಾತುಗಳು. ನಗರದಲ್ಲಿ ಬೃಹತ್‌ ಪ್ರಮಾಣದ ಉದ್ಯೋಗ ಸೃಷ್ಟಿ ಮಾಡಿರುವ ಗಾರ್ಮೆಂಟ್ಸ್‌ಗಳು, ಮಾಲ್‌, ಜ್ಯುವೆಲರಿ ಅಂಗಡಿಗಳು, ದೊಡ್ಡ ದೊಡ್ಡ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವವರ ಪರಿಸ್ಥಿತಿ ಇವಕ್ಕಿಂತ ಭಿನ್ನವೇನಿಲ್ಲ. ರಾಜ್ಯದ ಮೂಲೆಗಳಿಂದ ಜನರು ಉದ್ಯೋಗ ಅರಸಿ ಬೆಂಗಳೂರಿಗೆ ಬರುತ್ತಿರುವವರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡಿರುವ ಕ್ಷೇತ್ರಗಳ ಕಥೆಯಿದು. ಇಲ್ಲಿನ ಕೆಲಸದ ಸ್ವರೂಪವೂ ಒಂದೇ ತೆರನಾಗಿರುವುದಿಲ್ಲ. ಕೆಲವೊಮ್ಮೆ ಓಡಾಡಿಕೊಂಡು ಮಾಡುವಂತಿದ್ದರೆ, ಇನ್ನು ಕೆಲವು ಬೆಳಿಗ್ಗೆಯಿಂದ ಸಂಜೆವರೆಗೂ ಒಂದೇ ಸ್ಥಳದಲ್ಲಿ ಕೂತು ಮಾಡಬೇಕು ಹಾಗೆಯೇ ನಿಂತೇ ಕೆಲಸ ಮಾಡುವುವು ಇದೆ. 

ಆದರೆ ಇಲ್ಲಿ ನಿಂತು ಕೆಲಸ ಮಾಡುವ ಸ್ಥಳಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಈ ಕ್ಷೇತ್ರಗಳು ಹಿಂದೇಟು ಹೊಡೆಯುತ್ತಿವೆ. ಪುರುಷರೇ ಆಗಲಿ, ಮಹಿಳೆಯರೇ ಆಗಲಿ ಒಂದು ಗಂಟೆಗಿಂತ ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಇನ್ನು ನಮ್ಮ ಸಮಾಜದಲ್ಲಿ ಜಾರಿಯಲ್ಲಿರುವ ಕೆಲವು ಸಂಪ್ರದಾಯಗಳಲ್ಲಿ ಮನೆಯ ಕೆಲಸವನ್ನು ಮಹಿಳೆಯರೇ ಮಾಡಬೇಕು ಎಂಬುದು ಈ ಉದ್ಯೋಗಕ್ಕೆ ಇನ್ನಷ್ಟು ತೊಂದರೆ ಉಂಟು ಮಾಡುತ್ತದೆ. 

ಏನಾಗುತ್ತದೆ...?
‘4 ರಿಂದ 5 ಗಂಟೆ ಸತತವಾಗಿ ನಿಲ್ಲುವುದರಿಂದ ಮೀನು ಖಂಡ, ತೊಡೆಯ ಹಿಂಭಾಗ, ಬೆನ್ನಿನ ಮೂಳೆಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ನೋವು ಹೆಚ್ಚಾಗಿ ಹಿಡಿದುಕೊಳ್ಳುತ್ತವೆ. ಇದರಿಂದ ಮಂಡಿ, ಕೀಲು, ಸೊಂಟ ನೋವು ಕಾಣಿಸಿಕೊಂಡು ಧೀರ್ಘಕಾಲಿಕವಾಗಿ ಬಳಲುವಂತೆ ಮಾಡುತ್ತದೆ. ಸುಮಾರು ಗಂಟೆಗಳ ಕಾಲ ನಿಂತೇ ಇರುವುದರಿಂದ ಪಾದಗಳ ಅಡಿಯಲ್ಲಿ ನೋವು  ಬರುತ್ತದೆ. ತುಂಬಾ ಗಟ್ಟಿಯಾದ ಚಪ್ಪಲಿಗಳನ್ನೂ ಇವರು ಧರಿಸುವುದರಿಂದ ಪಾದ ನೋವು ಹೆಚ್ಚಾಗುತ್ತದೆ.’ 

‘ಒಂದೇ ಭಂಗಿಯಲ್ಲಿ ನಿಂತು ಅಥವಾ ಕೂತು ಕೆಲಸ ಮಾಡುವುದರಿಂದ ರಕ್ತನಾಳಗಳಲ್ಲಿ ರಕ್ತ ಪೂರೈಕೆಗೆ ಅಡಚಣೆಯಾಗುತ್ತದೆ. ತುಂಬಾ ಹೊತ್ತು ನಿಂತಿರುವುದರಿಂದ ರಕ್ತನಾಳಗಳಲ್ಲಿ ಉಬ್ಬುವಿಕೆ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ದೀರ್ಘಕಾಲದವರೆಗೆ ನಿಂತು ಕೆಲಸ ಮಾಡುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ’ ಎನ್ನುತ್ತಾರೆ ಮೂಳೆರೋಗ ತಜ್ಞ ಡಾ. ಬೋಪಣ್ಣ. 

*
ಏನು ಮಾಡಬೇಕು?
ನಿಯಮಿತವಾಗಿ ಸ್ರ್ಟೆಚಿಂಗ್‌ ವ್ಯಾಯಾಮ ಮಾಡುತ್ತಿರಬೇಕು. ಅರ್ಧ ಗಂಟೆಗೊಮ್ಮೆ 5ರಿಂದ 10 ನಿಮಿಷ ಕೂರಬೇಕು. ಕೆಲಸವಿಲ್ಲದೇ ಇದ್ದಾಗ ಕೂರಬೇಕು. ನಿಂತಾಗ ಸೊಂಟ, ನರ, ಕಾಲು ನೋವು ಬರುತ್ತಿದೆ ಎಂದರೆ ಚಿಕ್ಕ ಸ್ಟೂಲ್‌ ಒಂದನ್ನು ಬಳಸಬೇಕು. ಇದರಿಂದ ಪಾದ ಹಾಗೂ ತೊಡೆಯ ಬಾಗಕ್ಕೆ ಹೆಚ್ಚಿನ ಒತ್ತಡ ನೀಡದೇ ಆರಾಮವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ಪಾದಗಳನ್ನು ಒಂದು ಅಡಿ ಎತ್ತರದಲ್ಲಿ ದಿಂಬುಗಳ ಮೇಲೆ ಇಟ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ. ಮೆತ್ತಗಿರುವ ಚಪ್ಪಲಿಗಳನ್ನು ಧರಿಸಬೇಕು.
–ಡಾ. ಬೋಪಣ್ಣ. ಮೂಳೆರೋಗ ತಜ್ಞ

*
ಮಹಿಳೆಯರು ಪೋಷಕಾಂಶಯುಕ್ತ ಆಹಾರ ಸೇವನೆ ಮಾಡದೇ ಇರುವುದರಿಂದ ಸಂಜೆ ಕೆಲಸ ಮುಗಿಯುವಷ್ಟರಲ್ಲಿ ಮಂಡಿ, ಕಾಲು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗರ್ಭಿಣಿ ಮಹಿಳೆಯರಿಗೆ ತುಂಬ ಹೊತ್ತು ನಿಂತು ಕೆಲಸ ಮಾಡುವುದರಿಂದ ಕಾಲು ಬಾವು ಬರುತ್ತದೆ. ಗರ್ಭಿಣಿಯರು ನಿಯಮಿತವಾಗಿ ಶೌಚಾಯಲಕ್ಕೆ ಹೋಗುವ ಅಗತ್ಯವಿರುತ್ತದೆ. ಹಾಗಾಗಿ ಆಗಾಗ ವಿರಾಮ ತೆಗೆದುಕೊಳ್ಳಲು ಅವಕಾಶವಿರಬೇಕು. 
–ಡಾ. ಶಶಿಕಲಾ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ

*
ಗಾರ್ಮೆಂಟ್ಸ್‌ ಮಾತ್ರವಲ್ಲ. ಯಾವುದೇ ಸ್ಥಳದಲ್ಲಿ ಕೆಲಸ ಮಾಡುವವರಾದರೂ ಬೆಳಗ್ಗೆಯಿಂದ ಸಂಜೆವರೆಗೂ ನಿಲ್ಲಿಸಿಯೇ ದುಡಿಸುವುದು ಅಮಾನವೀಯ. ಇದರಿಂದ ಮಹಿಳೆಯರ ಆರೋಗ್ಯದ ಬಗ್ಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಕನಿಷ್ಠ ಒಂದು ಗಂಟೆಗೆ ಒಮ್ಮೆ ವಿಶ್ರಾಂತಿ ಪಡೆಯಲು ಸಮಯಾವಕಾಶ ನೀಡಬೇಕು.
–ಪ್ರತಿಭಾ, ಗಾರ್ಮೆಂಟ್ಸ್‌ ಕಾರ್ಮಿಕರ ಯೂನಿಯನ್‌

*
ಕೇರಳ ಸರ್ಕಾರ ಇತ್ತೀಚೆಗೆ ‘ಅಂಗಡಿ ಮುಂಗಟ್ಟು ಕಾಯ್ದೆ–1960’ ತಿದ್ದುಪಡಿ ತಂದಿದ್ದು ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂರಲು ಆಸನಗಳನ್ನು ಒದಗಿಸಬೇಕು ಹಾಗೂ ನಿಯಮಿತವಾಗಿ ಎರಡು ಗಂಟೆಗೊಮ್ಮೆ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಕು ಎಂದಿದೆ. ಇದು ಕಾರ್ಮಿಕ ಸ್ನೇಹಿಯಾದಂತಹ ತಿದ್ದುಪಡಿಯಾಗಿದ್ದು ಕರ್ನಾಟಕ ಸರ್ಕಾರ ಇಲ್ಲಿನ ಕಾರ್ಮಿಕರ ಹಿತದೃಷ್ಟಿಯಿಂದ ಈ ಬಗ್ಗೆ ಗಮನ ಹರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು