ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಾಕೋಟ್‌ ದಾಳಿಯಲ್ಲಿ 300 ಉಗ್ರರ ಹತ್ಯೆ: ಪಾಕ್‌ನ ಮಾಜಿ ರಾಜತಾಂತ್ರಿಕ ಅಧಿಕಾರಿ

Published : 10 ಜನವರಿ 2021, 1:52 IST
ಫಾಲೋ ಮಾಡಿ
Comments

ಇಸ್ಲಾಮಾಬಾದ್‌: 2019 ರ ಫೆಬ್ರವರಿ 26 ರಂದು ಬಾಲಾಕೋಟ್‌ನ ಉಗ್ರರ ಶಿಬಿರದ ಮೇಲೆ ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಭಯೋತ್ಪಾದಕರು ಮೃತಪಟ್ಟಿದ್ದರು ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಉರ್ದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮಾಜಿ ರಾಜತಾಂತ್ರಿಕ ಅಧಿಕಾರಿ ಆಘಾ ಹಿಲಾಲಿ, 'ಭಾರತವು ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಯುದ್ಧದ ರೀತಿಯ ಕೃತ್ಯವೊಂದನ್ನು ಎಸಗಿತು. ಇದರಲ್ಲಿ ಕನಿಷ್ಠ 300 ಮಂದಿ ಮೃತಪಟ್ಟರು. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ, ಭಾರತದ ಈ ಕೃತ್ಯಕ್ಕೆ ಪಾಕಿಸ್ತಾನ ದಿಟ್ಟ ಉತ್ತರ ನೀಡಲು ವಿಫಲವಾಯಿತು' ಎಂದು ತಿಳಿಸಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿತ್ತು. ಮಿರಾಜ್ ವಿಮಾನಗಳು ಈ ವೈಮಾನಿಕ ದಾಳಿ ನಡೆಸಿದ್ದು, 12 ಮಿರಾಜ್- 2000 ಜೆಟ್ ವಿಮಾನಗಳು 1000 ಪೌಂಡ್ ತೂಕದ ಬಾಂಬ್‍ನಿಂದ ಗಡಿ ನಿಯಂತ್ರಣ ರೇಖೆಯಿಂದಾಚೆಯಿರುವ ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿದ್ದವು.

ಭಾರತೀಯ ವಾಯುಪಡೆ ಫೆ.26ರಂದು ಧ್ವಂಸ ಮಾಡಿದ ಬಾಲಾಕೋಟ್‌ನ ಜೈಷ್–ಎ–ಮೊಹಮದ್ ಉಗ್ರರ ಶಿಬಿರದಲ್ಲಿ ಭಯೋತ್ಪಾದಕರಿಗೆ ಉನ್ನತ ಹಂತದ ತರಬೇತಿ ಸಿಗುತ್ತಿತ್ತು ಎಂದು ವರದಿಗಳು ಪ್ರಕಟವಾಗಿದ್ದವು.

ಜಮ್ಮು ಕಾಶ್ಮೀರದ ಪುಲ್ವಾಮದ ಅವಂತಿಪುರದಲ್ಲಿ ಜೈಷ್–ಎ–ಮೊಹಮದ್ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನದ ಜೈಷ್‌–ಇ– ಮೊಹಮ್ಮದ್‌ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿತ್ತು. ಮಾತ್ರವಲ್ಲದೆ ದಾಳಿ ನಡೆಸಿದ್ದಾಗಿ ಸಂಘಟನೆ ಕಾಶ್ಮೀರ ಸುದ್ದಿ ಸಂಸ್ಥೆ ಜಿಎನ್‌ಎಸ್‌ಗೆ ಸಂದೇಶವೊಂದನ್ನು ಕಳುಹಿಸಿತ್ತು. ಒಟ್ಟು 70 ವಾಹನಗಳಲ್ಲಿ 2500 ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈ ವಾಹನ ಸಾಲಿನಲ್ಲಿ ನಿರ್ದಿಷ್ಟ ಬಸ್‌ ಒಂದರ ಬಳಿಗೆ ಸ್ಫೋಟಕ ತುಂಬಿದ್ದ ಕಾರು ತರುವಲ್ಲಿ ಯಶಸ್ವಿಯಾಗಿದ್ದ ಉಗ್ರ, ಅದನ್ನು ಸ್ಫೋಟಿಸಿದ್ದ.

ಅಭಿನಂದನ್‌ ಬಿಡುಗಡೆಗೂ ಮುನ್ನ ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ: ಪಾಕ್‌ ಸಂಸದ

ಭಾರತದಿಂದ ದಾಳಿ ಎದುರಿಸಬೇಕಾದ ಭಯದಿಂದ ಇಮ್ರಾನ್‌ ಖಾನ್‌ ಸರ್ಕಾರವು ಭಾರತೀಯ ವಾಯುಪಡೆಯ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಗಡಿಬಿಡಿಯಲ್ಲಿ ಬಿಡುಗಡೆ ಮಾಡಿತು ಎಂದು ಪಾಕಿಸ್ತಾನದ ಸಂಸದರೊಬ್ಬರು 2020 ರ ಅಕ್ಟೋಬರ್ 29ರಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು.

2019ರಂದು ಫೆ.27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳನ್ನು ಮಿಗ್‌-21 ಯುದ್ಧ ವಿಮಾನದ ಮೂಲಕ ವಿಂಗ್‌ ಕಮಾಂಡರ್‌ ಅಭಿನಂದನ್‌ ಬೆನ್ನಟ್ಟಿ ಹೋಗಿದ್ದರು. ಆ ಕಾದಾಟದಲ್ಲಿ ಅಭಿನಂದನ್‌ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು ಹಾಗೂ ಅವರ ವಿಮಾನವೂ ಪತನಗೊಂಡು ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಅವರನ್ನು ಮಾರ್ಚ್‌ 1ರ ರಾತ್ರಿ ಪಾಕಿಸ್ತಾನವು ವಾಘಾ ಗಡಿಯ ಮೂಲಕ ಬಿಡುಗಡೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT