ಬುಧವಾರ, ಆಗಸ್ಟ್ 17, 2022
25 °C

ಬ್ರಿಟನ್ನಿನಲ್ಲಿ ಮೊದಲ ಕೋವಿಡ್ ಲಸಿಕೆ ಹಾಕಿಸಿಕೊಂಡ 90ರ ವೃದ್ಧೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ಬ್ರಿಟನ್ ಮಂಗಳವಾರ ಚಾಲನೆ ನೀಡಿದ್ದು, ಕೋವಿಡ್ ವಿರುದ್ಧ ಅಧಿಕೃತ ಲಸಿಕೆ ಪ್ರಯೋಗಿಸಿದ ಜಗತ್ತಿನ ಮೊದಲ ದೇಶ ಎನಿಸಿಕೊಂಡಿದೆ. 90 ವರ್ಷದ ವೃದ್ಧೆ ಮಾರ್ಗರೆಟ್ ಕೀನನ್ ಅವರು ಮೊದಲ ಲಸಿಕೆ ಹಾಕಿಸಿಕೊಂಡರು.

ಫೈಝರ್–ಬಯೊಎನ್‌ಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ಅನುಮೋದನೆ ನೀಡಿದ ಕೆಲವೇ ದಿನಗಳಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮ ನಡೆದಿದೆ.

‘ಮೊದಲ ಲಸಿಕೆ ಹಾಕಿಸಿಕೊಂಡಿದ್ದು ಗೌರವದ ವಿಚಾರ’ ಎಂದು ಕೀನನ್ ಹೇಳಿದರು. ಎರಡನೇ ಲಸಿಕೆಯನ್ನು ಹಾಕಿಸಿಕೊಂಡವರ ಹೆಸರು ವಿಲಿಯಂ ಶೇಕ್ಸ್‌ಪಿಯರ್. 

ಮಂಗಳವಾರ ಬೆಳಿಗ್ಗಿನಿಂದಲೇ ಲಸಿಕೆ ಹಾಕಿಸಿಕೊಳ್ಳಲು ಬ್ರಿಟಷ್ ನಾಗರಿಕರು ಸಾಲುಗಟ್ಟಿದ್ದರು. ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಲಸಿಕೆ ನೀಡಿಕೆಯು ಮಹತ್ವದ ಮೈಲಿಗಲ್ಲು ಎಂದು ಬ್ರಿಟನ್ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

80 ವರ್ಷ ದಾಟಿದವರು, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ.

ಭಾರತ ಮೂಲದ ದಂಪತಿಗೂ ಲಸಿಕೆ

87 ವರ್ಷದ ಡಾ. ಹರಿ ಶುಕ್ಲಾ ಮತ್ತು ಅವರ ಪತ್ನಿ 83 ವರ್ಷದ ರಂಜನಿ ಅವರು ಆರಂಭಿಕ ಹಂತದಲ್ಲಿ ಲಸಿಕೆ ಪಡೆದ ಮೊದಲ ಭಾರತೀಯ ಮೂಲದ ದಂಪತಿ ಎನಿಸಿದ್ದಾರೆ. ನ್ಯೂಕ್ಯಾಸಲ್‌ನ ಆಸ್ಪತ್ರೆಯಲ್ಲಿ ಇವರಿಗೆ ಮಂಗಳವಾರ ಚುಚ್ಚುಮದ್ದು ನೀಡಲಾಯಿತು.

ರಷ್ಯಾ ಹಾಗೂ ಚೀನಾ ಸಹ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗಳ ತುರ್ತು ಬಳಕೆ ಪ್ರಕ್ರಿಯೆ ಆರಂಭಿಸಿವೆ. ಈ ಮಧ್ಯೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಜರ್ಮನಿಯಲ್ಲಿ ಹೆಚ್ಚು ಪ್ರಕರಣ ವರದಿಯಾದ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ವಿಧಿಸಲು ನಿರ್ಧರಿಸಲಾಗಿದೆ. ಇಸ್ರೇಲ್‌ನಲ್ಲಿ ಡಿ.9ರಿಂದ ರಾತ್ರಿ ಕರ್ಫ್ಯೂ ಹೇರಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ.

ಲಸಿಕೆ ಪ್ರಯೋಗಕ್ಕೆ ಸಿದ್ಧತೆ

*ಕೆನಡಾ: ಕೆಲವು ವಾರಗಳಲ್ಲಿ ಫೈಜರ್ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ

*ಬ್ರೆಜಿಲ್‌: ಚೀನಾದ ‘ಕರೊನಾವ್ಯಾಕ್’ ಲಸಿಕೆ ಅಭಿಯಾನ ಜನವರಿಯಲ್ಲಿ ಆರಂಭ

*ಇಸ್ರೇಲ್: ಫೈಜರ್ ಲಸಿಕೆಯು ಗುರುವಾರ ದೇಶಕ್ಕೆ ಬರಲಿದೆ. ವಯಸ್ಸಾದವರು, ಹೆಚ್ಚು ಅಪಾಯ ಎದುರಿಸುವ ಜನರಿಗೆ ಮೊದಲು ಲಸಿಕೆ ನೀಡಲಾಗುತ್ತದೆ

₹250ಕ್ಕೆ ಲಸಿಕೆ?

ಅತಿದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಒಂದು ಡೋಸ್‌ ಲಸಿಕೆಯನ್ನು ₹250ಕ್ಕೆ ಪೂರೈಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಹಾಗೂ ಸೆರಂ ನಡುವೆ ಲಸಿಕೆ ಒಪ್ಪಂದಕ್ಕೆ ಸದ್ಯದಲ್ಲೇ ಸಹಿ ಬೀಳುವ ಸಾಧ್ಯತೆಯಿದೆ.

ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಯ ಒಂದು ಡೋಸ್ ಬೆಲೆ ₹1,000 ಇರಲಿದೆ ಎಂದು ಸಂಸ್ಥೆಯ ಸಿಇಒ ಅದರ್ ಪೂನಾವಾಲಾ ಅವರು ಈ ಮೊದಲು ಹೇಳಿದ್ದರು. ‘ಸರ್ಕಾರವು ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದರೆ, ಕಡಿಮೆ ಬೆಲೆಗೆ ಸಿಗಲಿದೆ. ಮೊದಲು ಭಾರತೀಯರಿಗೆ ಲಸಿಕೆಯನ್ನು ವಿತರಿಸಿದ ಬಳಿಕ ವಿದೇಶಗಳಿಗೆ ರಫ್ತು ಮಾಡಲಾಗುವುದು’ ಎಂದು ಅವರು ಹೇಳಿದ್ದರು.

ಲಸಿಕೆ ತುರ್ತು ಬಳಕೆಗೆ ಮನವಿ

ದೇಶದಲ್ಲಿ ತುರ್ತು ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದೆ. ಸಂಸ್ಥೆಯು ‘ಕೋವ್ಯಾಕ್ಸಿನ್’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಅಮೆರಿಕದ ದೈತ್ಯ ಔಷಧ ಕಂಪನಿ ಫೈಜರ್ ಹಾಗೂ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ಗಳು ಭಾರತದಲ್ಲಿ ತುರ್ತು ಲಸಿಕೆ ಬಳಕೆಗೆ ಅನುಮತಿ ಕೋರಿ ಔಷಧ ನಿಯಂತ್ರಕರಿಗೆ ಈಗಾಗಲೇ ಮನವಿ ಸಲ್ಲಿಸಿವೆ. ಸೆರಂ ಸಂಸ್ಥೆಯು ಆಕ್ಸ್‌ಫರ್ಡ್ ಲಸಿಕೆ ‘ಕೋವಿಶೀಲ್ಡ್‘ಗೆ ತುರ್ತು ಅನುಮತಿ ಕೋರಿದೆ.

ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ. ಮುಂಬೈ, ದೆಹಲಿ, ಪಟ್ನಾ ಸೇರಿದಂತೆ ದೇಶದ 25 ಸ್ಥಳಗಳಲ್ಲಿ ಸಂಸ್ಥೆಯು ಮೂರನೇ ಹಂತದ ಪ್ರಯೋಗ ಹಮ್ಮಿಕೊಂಡಿದೆ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ಬುಧವಾರ ಸಭೆ ಸೇರಲಿದ್ದು, ಫೈಜರ್, ಸೆರಂ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಸಲ್ಲಿಸಿರುವ ತುರ್ತು ಬಳಕೆ ಅರ್ಜಿಗಳ ಪರಿಶೀಲನೆ ನಡೆಸಲಿದೆ. ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯವು (ಡಿಸಿಜಿಐ) ಈಗಾಗಲೇ ಅರ್ಜಿಗಳ ಪರಿಶೀಲನೆ ಆರಂಭಿಸಿದೆ.

ಕೆಲ ವಾರಗಳಲ್ಲಿ ಅನುಮತಿ:

ಮುಂದಿನ ಕೆಲವು ವಾರಗಳಲ್ಲಿ ಭಾರತದ ಔಷಧ ನಿಯಂತ್ರಕರು ಕೋವಿಡ್ ಲಸಿಕೆಗಳ ಬಳಕೆಗೆ ಪರವಾನಗಿ ನೀಡಬಹುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಫೈಜರ್, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಮನವಿಗಳು ಬಂದಿವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು