ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್–ರಷ್ಯಾ ಯುದ್ಧ: ನಿರಾಶ್ರಿತ ಸಾಕುಪ್ರಾಣಿಗಳ ಕತೆ–ವ್ಯಥೆ

Last Updated 28 ಫೆಬ್ರುವರಿ 2023, 18:11 IST
ಅಕ್ಷರ ಗಾತ್ರ

ಲುವ್ಯುವ್ (ಉಕ್ರೇನ್): ಕಳೆದ ಒಂದು ವರ್ಷದಿಂದ ಉಕ್ರೇನ್–ರಷ್ಯಾ ಯುದ್ಧ ನಡೆಯುತ್ತಲೇ ಇದೆ. ಇದರ ಪರಿಣಾಮ ಉಕ್ರೇನ್‌ನ ಹಲವು ಮನೆಗಳು ಪತನಗೊಂಡಿವೆ. ಇನ್ನೂ ಹಲವರು ಮನೆ ಬಿಟ್ಟು ತೆರಳಿದ್ದಾರೆ. ಇದರಿಂದಾಗಿ ಸಾಕು ಪ್ರಾಣಿಗಳು ತಮ್ಮ ಮಾಲಿಕರಿಂದ ಬೇರ್ಪಟ್ಟು ಅನಾಥವಾಗಿವೆ. ಇಂಥ ನಿರಾಶ್ರಿತ ಸಾಕು ಪ್ರಾಣಿಗಳಿಗೆ ಆಶ್ರಯ ತಾಣ ಒದಗಿಸುವ ಸೇವೆಯು ನಡೆಯುತ್ತಿದೆ.

ಉಕ್ರೇನ್‌ನ ಲುವ್ಯುವ್‌ಲ್ಲಿರುವ ಜ್ನೇಸಿನ್ಯಾ ಪಾರ್ಕ್‌ನ ವನ್ಯಧಾಮ ಪೂರ್ತಿ ನಿರಾಶ್ರಿತ ಸಾಕು ಪ್ರಾಣಿಗಳೇ ಕಂಡು ಬರುತ್ತಿವೆ. ಪಾರ್ಕ್‌ನಿಂದ ಹೊಮ್ಮುವ ಚೀರುವಿಕೆ, ಕೂಗುವಿಕೆಯು ಬಿರುಕುಬಿಟ್ಟ ಮದ್ದಳೆಯ ಸದ್ದಿನಂತೆ ಕೇಳಿಬರುತ್ತವೆ. ಇದು ಅಲ್ಲಿರುವ ನಿರಾಶ್ರಿತ ಸಾಕು ಪ್ರಾಣಿಗಳ ಅಳು ಎಂದು ಭಾಸವಾಗುವುದು.

ಬಾಂಬ್‌ ದಾಳಿಗೆ ಪತನಗೊಂಡ ಮನೆಗಳಿಂದ ರಕ್ಷಿಸಲ್ಪಟ್ಟ, ಮನೆಯರಿಗೆ ನೋಡಿಕೊಳ್ಳಲಾಗದೆ ಅನಾಥವಾದ ಸಾಕುಪ್ರಾಣಿಗಳಿಗೆ ಜ್ನೇಸಿನ್ಯಾ ಪಾರ್ಕ್ ಆಶ್ರಯ ಒದಗಿಸಿದೆ. ಕಂಬಳಿ, ಮರದ ಹಲಗೆ, ಲೋಹದ ಶೀಟು ಹೊದೆಸಿ ನಿರ್ಮಿಸಿದ ಶೆಡ್‌ನಲ್ಲಿ ಸಾಕು ಪ್ರಾಣಿಗಳನ್ನು ಇರಿಸಲಾಗಿದೆ. ಜತೆಗೆ ಅವುಗಳಿಗೆ ಬೇಕಾದ ಆಹಾರ ಪೇರಿಸಿಡಲಾಗಿದೆ.

ಓರೆಸ್ಟ್ ಜಲಿಪ್‌ಸ್ಕಿ ಪ್ರಾರಂಭಿಸಿದ ‘ಡೊಮಿವ್ಕಾ‘: ಗಾಯಗೊಂಡಿರುವ ಪ್ರಾಣಿಗಳ ರಕ್ಷಣೆಯ ಉದ್ದೇಶದಿಂದ ಓರೆಸ್ಟ್ ಜಲಿಪ್‌ಸ್ಕಿ ಅವರು ‘ಡೊಮಿವ್ಕಾ‘ ಹೆಸರಿನ ವನ್ಯ ಸಂರಕ್ಷಣಾ ಧಾಮವನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಿದರು. ರೆಕ್ಕೆ ಕತ್ತರಿಸಿಕೊಂಡ ಗೂಬೆ, ನಾಯಿಗಳಿಗೆ ಬೇಟೆಯಾಡಲು ತರಬೇತಿ ನೀಡಲು ಬಳಸಲ್ಪಟ್ಟು ಹಲ್ಲು ಮತ್ತು ಉಗುರು ಕಳೆದುಕೊಂಡ ತೋಳ, ಸರ್ಕಸ್‌ನ ಕೋತಿ ಮೊದಲಾದವು ಡೊಮಿವ್ಕಾದಲ್ಲಿ ಇದ್ದವು.

ರಷ್ಯಾದ ಆಕ್ರಮಣದ ಪರಿಣಾಮ ಡೊಮಿವ್ಕಾ ನಿರಾಶ್ರಿತ ಸಾಕು ಪ್ರಾಣಿ ಕೇಂದ್ರವಾಗಿ ಬದಲಾಗಿದೆ. ಇಲ್ಲಿ ಈಗ 500ಕ್ಕೂ ಹೆಚ್ಚು ನಾಯಿಗಳು, ಬೆಕ್ಕುಗಳು, ಮೊಲಗಳು, ಕುದುರೆಗಳು, ಕುರಿಮರಿಗಳು ಮತ್ತು ಪಕ್ಷಿಗಳು ಆಶ್ರಯ ಪಡೆಯುತ್ತಿವೆ.

‘ನಾವು ನಿರಾಶ್ರಿತ ನಾಯಿಗಳ ಸಾಕಲೆಂದು ಯಾವುದೇ ಜಾಗ ಒದಗಿಸಿಲ್ಲ, ಕಸ ಹಾಕಲು ಬಳಸುತ್ತಿದ್ದ ಇಟ್ಟಿಗೆಯ ಗೂಡುಗಳನ್ನೇ ಬಳಸಿ ನಾಯಿ ಗೂಡು ನಿರ್ಮಿಸಿದೆವು‘ ಎಂದು ಡೊಮಿವ್ಕಾದ ಸ್ವಯಂ ಸೇವಕಿ ವಿಕ್ಟೋರಿಯಾ ಹೇಳುತ್ತಾರೆ.

ದಾನ ನೀಡಿದ ಭೂಮಿಯಲ್ಲಿ 170 ಕುರಿಗಳು, ಮೇಕೆಗಳು ಮತ್ತು ಲಾಮಾಗಳನ್ನು ಡೊಮಿವ್ಕಾ ಸ್ವಯಂ ಸೇವಕರು ನೋಡಿಕೊಳ್ಳುತ್ತಿದ್ದಾರೆ. ಝಪೊರೇಝಿಯಾದಲ್ಲಿನ ಪೆಟ್ಟಿಂಗ್ ಮೃಗಾಲಯಕ್ಕೆ ಸೇರಿದ ಈ ಪ್ರಾಣಿಗಳನ್ನು ಮೃಗಾಲಯದಿಂದ ಕೈಬಿಡಲಾಗಿತ್ತು.

‘ಕಳೆದ ವರ್ಷದಿಂದ ನಮ್ಮ ಸ್ವಯಂ ಸೇವಕರು ಸಾವಿರಾರು ಸಾಕು ಪ್ರಾಣಿಗಳಿಗೆ ಆಶ್ರಯ ಕೊಟ್ಟಿದ್ದಾರೆ‘ ಎಂದು ಡೊಮಿವ್ಕಾ ಸ್ಥಾಪಕ ಓರೆಸ್ಟ್ ಹೇಳುತ್ತಾರೆ.

‘ಯುದ್ಧ ಶುರುವಾದ ನಂತರ ಮಾಲಿಕರಿಗೆ ಮತ್ತು ಸಂರಕ್ಷಕರಿಗೆ ವ್ಯಾಕ್ಸಿನೇಷನ್‌ ಮಾಡಿಸದೆಯೂ ಇಲ್ಲಿನ ಸಾಕು ಪ್ರಾಣಿಗಳನ್ನು ಉಕ್ರೇನ್ ಗಡಿ ಭಾಗದ ಮೂಲಕ ಯುರೋಪ್‌ ದೇಶಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಆಗ ಪೊಲೆಂಡ್ ಮತ್ತು ಜರ್ಮನಿಯಿಂದ ಬಸ್ಸುಗಟ್ಟಲೆ ಬಂದ ಜನರು ಇಲ್ಲಿಂದ ನಾಯಿ, ಬೆಕ್ಕು, ಮೊಲ ಸೇರಿ 5,500ರಷ್ಟು ಪ್ರಾಣಿಗಳನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. ಬಾಕಿ 1,500 ಸಾಕು ಪ್ರಾಣಿಗಳನ್ನು ಇಲ್ಲಿನ ಜನರೇ ಸಾಕಲು ತೆಗೆದುಕೊಂಡರು. ಆದರೆ ಈಗೀಗ ದತ್ತು ತೆಗೆದುಕೊಳ್ಳುವಿಕೆ ಕಡಿಮೆಯಾಗುತ್ತಿದೆ‘ ಎಂದು ಡೊಮಿವ್ಕಾ ಸ್ವಯಂ ಸೇವಕರೊಬ್ಬರು ತಿಳಿಸಿದರು.

‘ಇಲ್ಲಿನ ಹಿಮತುಂಬಿದ ನೆಲದಲ್ಲೂ ನಾಯಿಗಳನ್ನು ದಿನಕ್ಕೆ ಮೂರು ಬಾರಿ ವಾಕಿಂಗ್ ಕರೆದಕೊಂಡು ಹೋಗುತ್ತೇವೆ. ಆಗ ಎದುರಾಗುವ ಅದರ ಮಾಜಿ ಮಾಲಕರು ವಾಪಸ್ ನಾಯಿಯನ್ನು ಸಾಕಲು ಬಯಸಿದರೂ ಅದನ್ನು ಇಟ್ಟುಕೊಳ್ಳಲು ಅವರಿಗೆ ಸ್ವಂತ ಮನೆಗಳಿಲ್ಲ‘ ಎಂದು ಅವರು ಹೇಳಿದರು

ನಿರಾಶ್ರಿತ ಸಾಕು ಪ್ರಾಣಿ ಆಶ್ರಯ ತಾಣವಾದ ಡೊಮಿವ್ಕಾಗೆ ಹಲವಾರು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಹಣಕಾಸು ನೆರವನ್ನು ನೀಡುತ್ತಿವೆ. ಅವುಗಳಲ್ಲಿ ಯು–ಹಾರ್ಟ್ಸ್ ಫೌಂಡೇಷನ್, ಯು–ಅನಿಮಲ್ಸ್ ಮತ್ತು ಅಂತರರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ನಿಗಮ ಕೈಜೋಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT