ಶುಕ್ರವಾರ, ಸೆಪ್ಟೆಂಬರ್ 17, 2021
22 °C

ತಾಲಿಬಾನ್‌ ಸರ್ಕಾರ ರಚನೆ ವಿಳಂಬ: ಪ್ರಾತಿನಿಧ್ಯಕ್ಕಾಗಿ ಮಹಿಳೆಯರ ಪ್ರತಿಭಟನೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಯಾವ ರೀತಿಯ ಸರ್ಕಾರ ರಚಿಸಲಿದೆ ಎಂಬುದನ್ನು ಇಡೀ ಜಗತ್ತು ಗಮನಿಸುತ್ತಿದೆ.

ಇದು ತಾಲಿಬಾನ್‌ ಮೇಲೆಯೂ ಒತ್ತಡ ಹೇರಿದೆ. ಹಾಗಾಗಿ ಸರ್ಕಾರ ರಚನೆಯ ವಿವರಗಳನ್ನು ತಾಲಿಬಾನ್‌ ಶುಕ್ರವಾರವೂ ಬಹಿರಂಗಪಡಿಸಿಲ್ಲ. 

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಸರ್ಕಾರ ರಚನೆಯ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಶನಿವಾರದವರೆಗೆ ಈ ಘೋಷಣೆ ಹೊರಬೀಳದು ಎಂದು ತಾಲಿಬಾನ್‌ ವಕ್ತಾರರು ತಿಳಿಸಿದ್ದಾರೆ. 

ಕಳೆದ 20 ವರ್ಷಗಳಲ್ಲಿ ತಾಲಿಬಾನ್‌ ಬಂಡುಕೋರ ಸಂಘಟನೆಯಷ್ಟೇ ಆಗಿತ್ತು. ಈಗ, ಬಂಡುಕೋರತನವನ್ನು ಬಿಟ್ಟು ಆಳ್ವಿಕೆಯ ಗತಿಗೆ ಸಂಘಟನೆಯು ಬದಲಾಗಬೇಕಿದೆ.

ದೇಶದ ಆರ್ಥಿಕ ದುಃಸ್ಥಿತಿಯ ಜತೆಗೆ, ಆಳ್ವಿಕೆಯ ಮನೋಧರ್ಮ ರೂಢಿಸಿಕೊಳ್ಳುವುದು ಕೂಡ ದೊಡ್ಡ ಸವಾಲೇ ಆಗಿದೆ. ಜತೆಗೆ, ಪಂಜ್‌ಶಿರ್‌ ಪ್ರಾಂತ್ಯದಲ್ಲಿ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್‌ ಜತೆಗೆ ಕದನ ತೀವ್ರಗೊಂಡಿದೆ.

ಪಶ್ಚಿಮದ ದೇಶಗಳು ಕಾಯ್ದು ನೋಡುವ ತಂತ್ರದ ಮೊರೆ ಹೋಗಿವೆ. ಹೊಸ ಸರ್ಕಾರದ ಜತೆಗೆ ಸಂ‍ಪರ್ಕ ಇರಿಸುವ ವಿಚಾರದಲ್ಲಿಯೂ ಮುಕ್ತ ಮನಸ್ಥಿತಿ ಇದೆ ಎಂದು ಹಲವು ದೇಶಗಳು ಹೇಳಿವೆ. 

ಮಹಿಳೆಯರ ಪ್ರತಿಭಟನೆ
ಹೊಸ ಸರ್ಕಾರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ ಎಂಬುದು ಅಫ್ಗಾನಿಸ್ತಾನದ ಮಹಿಳಾ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಬೂಲ್‌ನಲ್ಲಿ ಸುಮಾರು 30 ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೆರಾತ್‌ನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದ್ದರು. 

ತಾಲಿಬಾನ್‌ ನೇತೃತ್ವದ ಆಳ್ವಿಕೆಯಲ್ಲಿ ಮಹಿಳೆಯರ ಹಕ್ಕುಗಳು ಮೊಟಕಾಗಲಿವೆ ಎಂಬುದು ತೀವ್ರ ಕಳವಳಕ್ಕೆ ಕಾರಣವಾಗಿದೆ. 

ಐರೋಪ್ಯ ಒಕ್ಕೂಟದ ಷರತ್ತು
ತಾಲಿಬಾನ್‌ ನೇತೃತ್ವದ ಅಫ್ಗಾನಿಸ್ತಾನದ ಜತೆಗೆ ಸಂಪರ್ಕ ಹೊಂದಬೇಕಿದ್ದರೆ ಆ ದೇಶವು ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದು ಐರೋಪ್ಯ ಒಕ್ಕೂಟವು ಶುಕ್ರವಾರ ಹೇಳಿದೆ. 

ದೇಶವು ಭಯೋತ್ಪಾದನೆ ಬೆಂಬಲಿಸಬಾರದು, ದೇಶದ ಜನರಿಗೆ ಮಾನವೀಯ ನೆರವು ಒದಗಿಸಲು ಅಡ್ಡಿ ಮಾಡಬಾರದು, ಮಾನವ ಹಕ್ಕುಗಳನ್ನು ಕಾಪಾಡಬೇಕೆಂಬ ಷರತ್ತುಗಳನ್ನು ಒಡ್ಡಲಾಗಿದೆ.  ದೇಶವು ತಾಲಿಬಾನ್‌ ವಶವಾಗುತ್ತಿದ್ದಂತೆ 27 ದೇಶಗಳ ಒಕ್ಕೂಟವು ತಮ್ಮ ರಾಯಭಾರಿಗಳನ್ನು ತೆರವು ಮಾಡಿದ್ದವು. ಆದರೆ, ಈಗ ತಾಲಿಬಾನ್‌ಗೆ ಸಹಕರಿಸಲು ಸಿದ್ಧ ಎಂದು ಒಕ್ಕೂಟ ಹೇಳಿದೆ.

ಟಿ.ವಿ ವಾಹಿನಿ: ಧಾರಾವಾಹಿ, ಹಾಸ್ಯಕ್ಕೆ ಕೊಕ್‌
ದುಬೈ (ಎಎಫ್‌ಪಿ):
ಅಫ್ಗಾನಿಸ್ತಾನದ ಬಹು ಜನಪ್ರಿಯ ಟಿವಿ ವಾಹಿನಿಯೊಂದು ಹಾಸ್ಯ ಧಾರಾವಾಹಿ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ. ಅದರ ಬದಲಿಗೆ, ತಾಲಿಬಾನ್‌ ಆಡಳಿತಕ್ಕೆ ಹೊಂದುವಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ‌

ಇಸ್ಲಾಂ ಕಾನೂನು ಅಥವಾ ರಾಷ್ಟ್ರೀಯ ಹಿತಕ್ಕೆ ವಿರುದ್ಧವಾಗಿ ಮಾಧ್ಯಮಗಳು ಇರಬಾರದು ಎಂದು ತಾಲಿಬಾನ್‌ನಿಂದ ನಿರ್ದೇಶನ ಬಂದಿರುವುರಿಂದ, ಈ ವಾಹಿನಿಯು ಸ್ವಯಂಪ್ರೇರಿತವಾಗಿ ಈ ಬದಲಾವಣೆಗೆ ಮುಂದಾಗಿದೆ.

ಆದರೆ, ಇನ್ನೂ ಕೆಲವು ಸಂಸ್ಥೆಗಳಲ್ಲಿ ಮಹಿಳೆಯರೇ ರೇಡಿಯೊ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಯ ಭರವಸೆಯನ್ನು ತಾಲಿಬಾನ್‌ ನೀಡಿದ್ದರಿಂದ, ಈ ಸಂಸ್ಥೆಗಳು ಮಹಿಳೆಯರನ್ನು ಕೆಲಸದಿಂದ ತೆಗೆದುಹಾಕಿಲ್ಲ; ಎಷ್ಟರ ಮಟ್ಟಿಗೆ ಮಾಧ್ಯಮ ಸ್ವಾತಂತ್ರ್ಯ ಸಿಗಲಿದೆ ಎಂಬುದನ್ನು ಪರೀಕ್ಷಿಸುತ್ತಿವೆ.

ಸ್ವರ ಕಳೆದುಕೊಂಡ ಮಹಿಳಾ ವಾದ್ಯವೃಂದ
ಪೂರ್ಣ ಮಹಿಳೆಯರೇ ಇದ್ದ ಆರ್ಕೆಸ್ಟ್ರಾ ತಂಡ ‘ಝೋಹ್ರಾ’ ಅಫ್ಗಾನಿಸ್ತಾನದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಸಾಮಾಜಿಕ ಬದಲಾವಣೆಯ ಸಂಕೇತವಾಗಿತ್ತು. ಆದರೆ ತಾಲಿಬಾನ್‌ ಆಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮಹಿಳೆಯರ ಸಂಗೀತ ತಂಡವು ಮೌನಕ್ಕೆ ಜಾರಿದೆ.

ಜೊತೆಗೆ, ಇನ್ನು ಮುಂದೆ ಅಫ್ಗಾನಿಸ್ತಾನದಲ್ಲಿ ಸಂಗೀತ ಮೊಳಗುವುದೂ ಅನುಮಾನವಾಗಿದೆ. ಅಫ್ಗಾನಿಸ್ತಾನವು ತಾಲಿಬಾನ್‌ ಕೈವಶವಾದ ಸುದ್ದಿ ತಿಳಿದಾಗಲೇ ಬೆದರಿದ್ದಾಗಿ ಅಫ್ಗಾನಿಸ್ತಾನದ ಮಹಿಳಾ ವಾದ್ಯವೃಂದದ ನೆಗಿನ್‌ ಖ್ಪಾಲ್ವಾಕ್‌ (24) ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು