ಬುಧವಾರ, ಡಿಸೆಂಬರ್ 8, 2021
18 °C

ತಾಲಿಬಾನ್‌ ಸೇಡಿನ ಭೀತಿಯಲ್ಲಿ ಅಫ್ಗನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್‌: ತಾಲಿಬಾನ್‌ ಸೈನಿಕರು ಮನೆ ಮನೆಗೆ ಹೋಗಿ ತಮ್ಮ ವಿರೋಧಿಗಳು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಗುಪ್ತಚರ ವರದಿಯೊಂದು ಹೇಳಿದೆ. ತಾಲಿಬಾನ್‌ನ ಈ ಶೋಧವು ಅಫ್ಗಾನಿಸ್ತಾನದ ಜನರಲ್ಲಿ ಸೇಡಿನ ಭೀತಿ ಹುಟ್ಟಿಸಿದೆ. ವಿರೋಧಿಗಳಿಗೆ ಕ್ಷಮಾದಾನದ ಘೋಷಣೆಯು ಹುಸಿ ಎಂಬ ಭಾವ ಜನರಲ್ಲಿ ಮೂಡಿದೆ.

ಕ್ಷಮಾದಾನ, ಮಹಿಳೆಯರ ಹಕ್ಕುಗಳ ರಕ್ಷಣೆ ಮುಂತಾದ ಘೋಷಣೆಗಳ ಮೂಲಕ ತಾನು ಬದಲಾಗಿದ್ದೇನೆ ಎಂದು ಮನದಟ್ಟು ಮಾಡುವ ಪ್ರಯತ್ನವನ್ನು ತಾಲಿಬಾನ್‌ ಮಾಡಿದೆ. ಇದು ಸಾರ್ವಜನಿಕ ಸಂಪರ್ಕದ ಕಾರ್ಯತಂತ್ರ ಮಾತ್ರ ಎಂಬುದನ್ನು ಮನೆ ಮನೆ ಶೋಧವು ತೋರಿಸಿಕೊಟ್ಟಿದೆ. ಜತೆಗೆ, ಸಾವಿರಾರು ಜನರು ದೇಶ ತೊರೆಯಲು ಹಾತೊರೆಯುತ್ತಿರುವುದು ಇದಕ್ಕೆ ಪುಷ್ಟಿ ಕೊಟ್ಟಿದೆ. 

ಅಮೆರಿಕ ಮತ್ತು ನ್ಯಾಟೊ ಪಡೆಗಳ ಜತೆಗೆ ಕೆಲಸ ಮಾಡಿರುವ ವ್ಯಕ್ತಿಗಳ ಮನೆಗಳಿಗೆ ತಾಲಿಬಾನ್‌ ಸೈನಿಕರು ಭೇಟಿ ನೀಡಿದ್ದಾರೆ. ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವ ಜನರನ್ನು ಕೂಡ ಶೋಧಕ್ಕೆ ಒಳಪಡಿಸಲಾಗುತ್ತಿದೆ ಎಂದು ನಾರ್ವೆ ಸೆಂಟರ್‌ ಫಾರ್‌ ಗ್ಲೋಬಲ್‌ ಅನಾಲಿಸಿಸ್‌ ಸಿದ್ಧಪಡಿಸಿರುವ ವರದಿಯು ಹೇಳಿದೆ. 

ಮಾಹಿತಿ ಹಂಚಿಕೊಳ್ಳಲು ನಿರಾಕರಿಸುವ ಕುಟುಂಬಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ, ಚಿತ್ರಹಿಂಸೆಗೆ ಒಳಪಡಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕ್ರಿಶ್ಚಿಯನ್‌ ನೆಲ್ಮನ್ ಹೇಳಿದ್ದಾರೆ. 

ಇಂತಹ ಆರೋಪಗಳನ್ನು ತಾಲಿಬಾನ್‌ ನಿರಾಕರಿಸಿದೆ. ಮನೆಗಳಿಗೆ ಪ್ರವೇಶಿಸದಂತೆ ಸೈನಿಕರಿಗೆ ಹಲವು ಬಾರಿ ಸೂಚನೆ ನೀಡಲಾಗಿದೆ ಎಂದು ತಾಲಿಬಾನ್‌ ಹೇಳಿದೆ. 

ಆದರೆ, ವಾಸ್ತವ ಪರಿಸ್ಥಿತಿ ತಾಲಿಬಾನ್‌ ಹೇಳಿಕೊಂಡ ರೀತಿಯಲ್ಲಿ ಇಲ್ಲ. ‘ನಮ್ಮ ಜೀವಕ್ಕೆ ಅಪಾಯ ಇದೆ’ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿ ಆರ್‌ಟಿಎಯ ನಿರೂಪಕಿ ಶಬ್ನಂ ದಾವ್ರನ್‌ ಅವರು ಇತ್ತೀಚೆಗೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ. 

‘ಗುರುತು ಚೀಟಿ ಹೊಂದಿರುವ ಪುರುಷ ಸಿಬ್ಬಂದಿಗೆ ಕಚೇರಿ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆದರೆ, ನಾನು ಹೋದಾಗ, ವ್ಯವಸ್ಥೆ ಬದಲಾಗಿದ್ದು ನೀವು ಕೆಲಸ ಮುಂದುವರಿಸುವಂತಿಲ್ಲ ಎಂದು ಹೇಳಲಾಗಿದೆ’ ಎದು ಶಬ್ನಂ ಅವರು ವಿಡಿಯೊದಲ್ಲಿ ಹೇಳಿದ್ದಾರೆ. 

ಅಂತರರಾಷ್ಟ್ರೀಯ ಸಮುದಾಯವು ಅಫ್ಗಾನಿಸ್ತಾನದತ್ತ ಗಮನ ಹರಿಸಬೇಕು. ಕಳೆದ 20 ವರ್ಷಗಳ ಸಾಧನೆಯು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು