ಭಾನುವಾರ, ಅಕ್ಟೋಬರ್ 24, 2021
23 °C

ಅಫ್ಗನ್‌: ಮಹಿಳೆಗೆ ಉಪಸಚಿವ ಸ್ಥಾನವೂ ಇಲ್ಲ

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನದ ಮಧ್ಯಂತರ ಸಚಿವ ಸಂಪುಟಕ್ಕೆ ಉಪ ಸಚಿವರನ್ನು ಮಂಗಳವಾರ ಸೇರ್ಪಡೆ ಮಾಡಲಾಗಿದೆ. ಆದರೆ, ಈ ಬಾರಿಯೂ ಮಹಿಳೆಯರಿಗೆ ಸ್ಥಾನ ನೀಡಲಾಗಿಲ್ಲ. ಈ ತಿಂಗಳ ಆರಂಭದಲ್ಲಿ ಸಚಿವ ಸಂಪುಟ ರಚನೆಯಾದಾಗಲೂ ಮಹಿಳೆಯರಿಗೆ ಅವಕಾಶ ಕೊಟ್ಟಿರಲಿಲ್ಲ. 

ತಾಲಿಬಾನ್‌ ನೇತೃತ್ವದ ಸರ್ಕಾರದ ಕೃತ್ಯಗಳ ಆಧಾರದಲ್ಲಿ ಸಂಘಟನೆಯ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಅಂತರರಾಷ್ಟ್ರೀಯ ಸಮುದಾಯ ಹೇಳಿತ್ತು. ತಾಲಿಬಾನ್‌ ನೇತೃತ್ವದ ಸರ್ಕಾರಕ್ಕೆ ಮಾನ್ಯತೆ ನೀಡುವ ವಿಚಾರವು ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬುದರ ಮೇಲೆ ಅವಲಂಬಿತ ಎಂದು ಹಲವು ದೇಶಗಳು ಹೇಳಿದ್ದವು.

1990ರ ದಶಕದಲ್ಲಿ ತಾಲಿಬಾನ್‌ ಆಳ್ವಿಕೆ ಇದ್ದಾಗಲೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಶಾಲೆ, ಕೆಲಸ ಮತ್ತು ಸಾರ್ವಜನಿಕ ಜೀವನದಲ್ಲಿ ಅವಕಾಶ ಇರಲಿಲ್ಲ.  ಈ ಬಾರಿ ಹಜಾರಾದಂತಹ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. ಮಹಿಳೆಯರಿಗೆ ಮುಂದೆ ಅವಕಾಶ ದೊರೆಯಲಿದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಝಬೀವುಲ್ಲಾ ಮುಜಾಹಿದ್‌ ಹೇಳಿದ್ದಾರೆ.

ಕಮಾಂಡರ್‌ಗಳಿಗೆ ಹುದ್ದೆ
ತಾಲಿಬಾನ್‌ ಸೇನೆಯ ಕಮಾಂಡರ್‌ಗಳಲ್ಲಿ ಕೆಲವರಿಗೆ ಮಹತ್ವದ ಸ್ಥಾನಗಳನ್ನು ನೀಡಲಾಗಿದೆ. ಮುಲ್ಲಾ ಅಬ್ದುಲ್‌ ಕಯ್ಯೂಂ ಜಾಕಿರ್‌ ಅವರನ್ನು ರಕ್ಷಣಾ ಉಪಸಚಿವರಾಗಿ ನೇಮಿಸಲಾಗಿದೆ. ಇನ್ನೊಬ್ಬ ಪ್ರಭಾವಿ ಕಮಾಂಡರ್‌ ಸದರ್‌ ಇಬ್ರಾಹಿಂ ಅವರನ್ನು ಗೃಹ ಸಚಿವಾಲಯದ ಉಪಸಚಿವನಾಗಿ ನೇಮಿಸಲಾಗಿದೆ. 

ಅಮೆರಿಕ ಬೆಂಬಲಿತ ಅಫ್ಗಾನಿಸ್ತಾನ ಸರ್ಕಾರದ ವಿರುದ್ಧ ಯುದ್ಧ ಸಾರುವಂತೆ ತಾಲಿಬಾನ್‌ ಮನವೊಲಿಸಿದವರೇ ಇವರು ಎನ್ನಲಾ‌ಗುತ್ತಿದೆ. 

ಇವರ ನೇಮಕದೊಂದಿಗೆ ಸರ್ಕಾರದಲ್ಲಿ ತೀವ್ರವಾದಿಗಳ ಸಂಖ್ಯೆ ಹೆಚ್ಚಳವಾಗಿದೆ. ಹಖ್ಖಾನಿ ಗುಂಪಿನ ನಾಯಕ ಸಿರಾಜುದ್ದೀನ್‌ ಹಖ್ಖಾನಿಯನ್ನು ಸಚಿವನಾಗಿ ಈಗಾಗಲೇ ನೇಮಿಸಲಾಗಿದೆ. ಈತನ ಹಖ್ಖಾನಿ ಗುಂಪು ನಾಗರಿಕರ ಮೇಲೆ ಹಲವು ದಾಳಿ ನಡೆಸಿದ ಕುಖ್ಯಾತಿ ಹೊಂದಿದೆ.

‘ಅಫ್ಗನ್‌: ಐಎಸ್‌, ಅಲ್‌ ಕೈದಾ ಇಲ್ಲ’
ಕಾಬೂಲ್‌ (ರಾಯಿಟರ್ಸ್‌): ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಮತ್ತು ಅಲ್‌ ಕೈದಾ ಉಗ್ರರು ಅಫ್ಗಾನಿಸ್ತಾನದಲ್ಲಿ ಇದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ತಾಲಿಬಾನ್‌ ಹೇಳಿದೆ. ಆದರೆ, ಜಲಾಲಾಬಾದ್‌ ನಗರದಲ್ಲಿ ಇತ್ತೀಚೆಗೆ ನಡೆದ ಬಾಂಬ್‌ ದಾಳಿಯ ಹೊಣೆಯನ್ನು ಐ.ಎಸ್‌ ಹೊತ್ತುಕೊಂಡಿತ್ತು. 

ಅಲ್‌ಕೈದಾ ಜತೆಗಿನ ನಂಟು ಕಡಿದುಕೊಳ್ಳಬೇಕು ಎಂದು ತಾಲಿಬಾನ್‌ನ ಮೇಲೆ ಅಂತರರಾಷ್ಟ್ರೀಯ ಒತ್ತಡ ಇದೆ. ಅಮೆರಿಕದ ಮೇಲೆ 2001ರ ಸೆಪ್ಟೆಂಬರ್‌ 11ರಂದು ಅಲ್‌ ಕೈದಾ ದಾಳಿ ನಡೆಸಿತ್ತು.

ತಾಲಿಬಾನ್‌ ಮತ್ತು ಐ.ಎಸ್‌ ನಡುವೆ ಆರ್ಥಿಕ ಮತ್ತು ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿವೆ. ಎರಡೂ ಸಂಘಟನೆಗಳ ನಡುವೆ ಬದ್ಧ ವೈರತ್ವ ಇದೆ. ಹಾಗಾಗಿ, ತಾಲಿಬಾನ್‌ ವಿರುದ್ಧ ಸರಣಿ ದಾಳಿಗಳನ್ನು ಐ.ಎಸ್‌ ನಡೆಸಿದೆ. 

‘ಅಲ್‌ ಕೈದಾಕ್ಕೆ ಸಂಬಂಧಿಸಿದ ಯಾರು ಕೂಡ ಅಫ್ಗಾನಿಸ್ತಾನದಲ್ಲಿ ಇಲ್ಲ. ಅಫ್ಗಾನಿಸ್ತಾನದಿಂದ ಬೇರೆ ಯಾವುದೇ ದೇಶಕ್ಕೆ ಯಾವುದೇ ರೀತಿಯ ಹಾನಿ ಆಗದು. ಇದಕ್ಕೆ ನಾವು ಬದ್ಧ’ ಎಂದು ತಾಲಿಬಾನ್‌ ವಕ್ತಾರ ಝಬೀವುಲ್ಲಾ ಮುಜಾಹಿದ್‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು