ಮಂಗಳವಾರ, ಮಾರ್ಚ್ 28, 2023
31 °C

ಮೂರನೇ ಹಂತ ತಲುಪಿದ ಆಸ್ಟ್ರಾಜೆನೆಕಾದ ಕೋವಿಡ್‌–19 ಲಸಿಕೆ: ಟ್ರಂಪ್‌ ಘೋಷಣೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್‌ ಡಿಸಿ: ಕೋವಿಡ್‌–19 ಚಿಕಿತ್ಸೆಗೆ ನಡೆಸಲಾಗುತ್ತಿರುವ ಪ್ರಯೋಗಗಳಲ್ಲಿ ಆಸ್ಟ್ರಾಜೆನೆಕಾದ ಲಸಿಕೆ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ತಲುಪಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಪ್ರಕಟಿಸಿದ್ದಾರೆ.

'ಆಸ್ಟ್ರಾಜೆನೆಕಾದ (AstraZeneca) ಕೋವಿಡ್‌ ಲಸಿಕೆ ಅಮೆರಿಕದಲ್ಲಿ ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ತಲುಪಿದೆ ಹಾಗೂ ಇನ್ನೇನು ಅಂತಿಮ ಹಂತಗಳಲ್ಲಿರುವ ಹಲವು ಲಸಿಕೆಗಳ ಸಾಲಿಗೆ ಸೇರ್ಪಡೆಯಾಗಿದೆ. ಜನರು ಅಸಾಧ್ಯವೆಂದೇ ಭಾವಿಸಿರುವ ಕಾರ್ಯಗಳನ್ನು ನಾವು ಅಮೆರಿಕದಲ್ಲಿ ನಡೆಸುತ್ತಿದ್ದೇವೆ' ಎಂದು ಟ್ರಂಪ್‌ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಲಸಿಕೆ ಪ್ರಯೋಗ ಪ್ರಕ್ರಿಯೆಗಳಿಗೆ ಕೆಲವು ವರ್ಷಗಳೇ ಹಿಡಿಯುತ್ತವೆ. ಆದರೆ, ತಮ್ಮ ಆಡಳಿತವು ಅದನ್ನು ಕೆಲವೇ ತಿಂಗಳಲ್ಲಿ ಸಾಧ್ಯವಾಗುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಆಕ್ಸ್‌ಫರ್ಡ್ ಯೂನಿವರ್ಸಿಟಿಯಲ್ಲಿ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಲಸಿಕೆಯ ಮನುಷ್ಯರ ಮೇಲಿನ ಪ್ರಯೋಗಗಳಿಗೆ ಅಮೆರಿಕದ 80 ಭಾಗಗಳಲ್ಲಿ ಸುಮಾರು 30,000 ಸ್ವಯಂ ಸೇವಕರನ್ನು ನೋಂದಾಯಿಸಿಕೊಳ್ಳಲಿದೆ. ಈ ಕುರಿತು ಆಸ್ಟ್ರಾಜೆನೆಕಾ ಸಹ ಪ್ರಕಟಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

'18 ವರ್ಷ ವಯಸ್ಸು ಮೇಲ್ಪಟ್ಟವ ಸುಮಾರು 30,000 ಜನರನ್ನು ಆಸ್ಟ್ರಾಜೆನೆಕಾದ ಕೋವಿಡ್‌ ಲಸಿಕೆ ಪ್ರಯೋಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.  ವಿವಿಧ ಪ್ರಾಂತ್ಯಗಳಿಂದ ಬಂದಿರುವವರು, ಬೇರೆ ಬೇರೆ ಸಮುದಾಯ, ಜನಾಂಗದ ಆರೋಗ್ಯವಂತರು ಅಥವಾ ಕಾಯಿಲೆಗಳಿದ್ದರೂ ಆರೋಗ್ಯ ಸ್ಥಿತಿ ನಿಯಂತ್ರಣ ಹೊಂದಿರುವವರು, ಎಚ್‌ಐವಿ ಇರುವವರು, ಕೊರೊನಾ ವೈರಸ್‌ ಸೋಂಕಿನ ಪರಿಣಾಮಗಳಿಗೆ ಒಳಗಾಗುವ ಹಂತದಲ್ಲಿರುವವರೂ ಪ್ರಯೋಗಗಳಿಗೆ ಒಳಗಾಗುತ್ತಿರುವುದಾಗಿ ಆಸ್ಟ್ರಾಜೆನೆಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Explainer | ಜಗತ್ತಿನಾದ್ಯಂತ ಕೋವಿಡ್ ಲಸಿಕೆ ಪ್ರಯೋಗ; ಅಂತಿಮ ಹಂತದಲ್ಲಿ 6 ಲಸಿಕೆ

ಅಮೆರಿಕದಲ್ಲಿ ಪ್ರಯೋಗಗಳ ವೇಗ ಹೆಚ್ಚಳದ ಭಾಗವಾಗಿ ಕೋವಿಡ್‌ ಲಸಿಕೆ ಮೂರನೇ ಹಂತದ ಪ್ರಯೋಗಗಳತ್ತ ಸಾಗಿದೆ. 2021ರ ಜನವರಿಗೆ ಕೋವಿಡ್‌–19ಗೆ ಪರಿಣಾಮಕಾರಿ ಲಸಿಕೆಯನ್ನು 30 ಕೋಟಿ ಡೋಸ್‌ಗಳಷ್ಟು ಪೂರೈಕೆ ಮಾಡುವ ಗುರಿ ಹೊಂದಿದೆ.

ಯೂನಿವರ್ಸಿಟಿ ಆಫ್‌ ಆಕ್ಸ್‌ಫರ್ಡ್‌ ಮತ್ತು ಬ್ರಿಟಿಷ್–ಸ್ವೀಡಿಷ್‌ ಕಂಪನಿ ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಲಸಿಕೆಯ ಮೇಲೆ ಬಹುನಿರೀಕ್ಷೆ ಸೃಷ್ಟಿಯಾಗಿದೆ. ಚಿಂಪಾಂಜಿಯ ಅಡೆನೊ ವೈರಸ್ ಆಧಾರಿತ 'ChAdOx1' ಲಸಿಕೆ ಮೊದಲ ಎರಡು ಹಂತಗಳ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದು, ಸುರಕ್ಷಿತ ಲಸಿಕೆ ಎಂಬ ಭರವಸೆ ಮೂಡಿಸಿದೆ.

ಜಗತ್ತಿನಾದ್ಯಂತ ಕೋವಿಡ್‌ ಲಸಿಕೆ ಪ್ರಯೋಗಗಳ ಪೈಕಿ ಆಸ್ಟ್ರಾಜೆನೆಕಾ, ಮಾಡರ್ನಾ ಇಂಕ್‌. ಹಾಗೂ ಪಿಫಿಜರ್‌ ಇಂಕ್‌. ಸಂಸ್ಥೆಗಳ ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು