ಪ್ರೇಯಸಿ ಜತೆ ರಹಸ್ಯ ವಿವಾಹ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಮೂರನೇ ಮದುವೆ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರೇಯಸಿ ಕ್ಯಾರಿ ಸೈಮನ್ಸ್ ಜತೆ ಶನಿವಾರ ವೆಸ್ಟ್‌ಮಿನಿಸ್ಟರ್ ಕ್ಯಾಥಡ್ರಲ್‌ನಲ್ಲಿ ರಹಸ್ಯ ಕಾರ್ಯಕ್ರಮವೊಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಪ್ರಧಾನಿ ಜಾನ್ಸನ್‌ಗೆ ಇದು ಮೂರನೇ ವಿವಾಹವಾಗಿದೆ.
ಈ ಬಗ್ಗೆ ಬ್ರಿಟನ್ ಪತ್ರಿಕೆಗಳು ವರದಿ ಪ್ರಕಟಿಸಿವೆ ಎಂದು ರಾಯಿಟರ್ಸ್ ಹೇಳಿದ್ದು, ಲಂಡನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಿ ಕರೆಸಿಕೊಳ್ಳಲಾಯಿತು, ಪ್ರಧಾನಿ ಜಾನ್ಸನ್ ಅವರ ಕಚೇರಿಯ ಹಿರಿಯ ಸದಸ್ಯರಿಗೂ ಮದುವೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ.
ಕೋವಿಡ್ 19 ನಿಯಮಾವಳಿ ಇರುವುದರಿಂದ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಮದುವೆಯಲ್ಲಿ 30 ಜನರಷ್ಟೇ ಪಾಲ್ಗೊಳ್ಳಲು ಅವಕಾಶವಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಕ್ಯಾಥೊಲಿಕ್ ಕ್ಯಾಥಡ್ರಲ್ ಅನ್ನು ಏಕಾಏಕಿ ಮುಚ್ಚಲಾಯಿತು. ನಂತರ ಲಿಮೊಸಿನ್ ಕಾರಿನಲ್ಲಿ ಸೈಮನ್ಸ್ ಶ್ವೇತ ವರ್ಣದ ವಸ್ತ್ರ ಧರಿಸಿ 30 ನಿಮಿಷ ತಡವಾಗಿ ಬಂದರು ಎಂದು ವರದಿಗಳು ಹೇಳಿವೆ.
ಎರಡನೇ ಪತ್ನಿ ಮರೀನಾ ವೀಲರ್ ಜತೆ ವಿವಾಹ ವಿಚ್ಚೇದನ ಪಡೆದ ಬಳಿಕ, ಜಾನ್ಸನ್ (56) ಮತ್ತು ಸೈಮನ್ಸ್ (33) 2019ರಿಂದ ಡೌನಿಂಗ್ ಸ್ಟ್ರೀಟ್‌ನಲ್ಲಿ ಸಹಜೀವನ ನಡೆಸುತ್ತಿದ್ದರು. ಕಳೆದ ವರ್ಷ ಅವರಿಬ್ಬರೂ ನಿಶ್ಚಿತಾರ್ಥದ ಕುರಿತು ಘೋಷಿಸಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು. ಜಾನ್ಸನ್‌ಗೆ ಕೋವಿಡ್-19 ಸೋಂಕು ತಗುಲಿ ಗುಣಮುಖರಾದ ಬಳಿಕ ಸೈಮನ್ಸ್ ಅವರು ಏಪ್ರಿಲ್ 2020ರಲ್ಲಿ ಪುತ್ರ ವಿಲ್ಫ್ರೆಡ್ ಲಾರಿ ನಿಕೊಲಾಸ್ ಜಾನ್ಸನ್‌ಗೆ ಜನ್ಮ ನೀಡಿದ್ದರು.
ನ್ಯೂಯಾರ್ಕ್: ₹7.2 ಕೋಟಿ ಬಹುಮಾನದ ಟಿಕೆಟ್ ಹಿಂದಿರುಗಿಸಿದ ಭಾರತೀಯ ಕುಟುಂಬ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.