ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: ಭಾರತದಿಂದ ಬರುವ ವಿಮಾನಗಳ ಮೇಲಿನ ನಿರ್ಬಂಧ ಸೆ.21ರವರೆಗೆ ವಿಸ್ತರಣೆ

Last Updated 11 ಆಗಸ್ಟ್ 2021, 6:24 IST
ಅಕ್ಷರ ಗಾತ್ರ

ಟೊರೊಂಟೊ: ‘ಕೆನಡಾವು ಕೋವಿಡ್‌ ಪ್ರಸರಣವನ್ನು ತಡೆಯಲು ಭಾರತದಿಂದ ನೇರವಾಗಿ ಇಲ್ಲಿಗೆ ಬರುವ ಪ್ರಯಾಣಿಕರ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಸೆಪ್ಟೆಂಬರ್‌ 21ರವರೆಗೆ ವಿಸ್ತರಿಸಿದೆ’ ಎಂದು ಫೆಡರಲ್‌ ಸಾರಿಗೆ ಸಚಿವಾಲಯವು ತಿಳಿಸಿದೆ.

ಏಪ್ರಿಲ್‌ನಲ್ಲಿ ಭಾರತದಲ್ಲಿ ಕೋವಿಡ್‌ ಉತ್ತುಂಗದಲ್ಲಿದ್ದಾಗ ಕೆನಡಾವು ಭಾರತದಿಂದ ನೇರವಾಗಿ ಆಗಮಿಸುವ ಮತ್ತು ಭಾರತಕ್ಕೆ ತೆರಳುವ ಎಲ್ಲಾ ವಿಮಾನಗಳ ಮೇಲೆ ನಿರ್ಬಂಧ ಹೇರಿತ್ತು. ಈಗಾಗಲೇ ಹಲವು ಬಾರಿ ಈ ಪ್ರಯಾಣ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಈ ನಿರ್ಬಂಧವು ಸರಕು ಸಾಗಣೆ, ವೈದ್ಯಕೀಯ ಮತ್ತು ಸೇನಾ ವಿಮಾನಗಳಿಗೆ ಅನ್ವಯಿಸುವುದಿಲ್ಲ.

‘ಕೆನಡಾದ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಹಾಗಾಗಿ ಸಾರ್ವಜನಿಕ ಆರೋಗ್ಯ ಇಲಾಖೆಯ ಮಾಹಿತಿಯನ್ನು ಪರಿಶೀಲಿಸಿದ ನಂತರ, ಕೆನಡಾ ಮತ್ತು ಭಾರತದ ನಡುವಿನ ನೇರ ವಿಮಾನದ ಮೇಲಿನ ನಿಷೇಧವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಕೆನಡಾದ ಸಾರಿಗೆ ಸಚಿವ ಒಮರ್‌ ಅಲ್ಗಾಬ್ರಾ ಅವರು ಟ್ವೀಟ್‌ ಮಾಡಿದ್ದಾರೆ.

‘ಕೆನಡಾ ಸರ್ಕಾರವು ಸೆಪ್ಟೆಂಬರ್ 21 ರವರೆಗೆ ಭಾರತದಿಂದ ನೇರ ವಿಮಾನವನ್ನು ಸ್ಥಗಿತಗೊಳಿಸಿದೆ. ಈ ಅವಧಿಯಲ್ಲಿ ಭಾರತದಿಂದ ಪರೋಕ್ಷ ಮಾರ್ಗದ ಮೂಲಕ ಕೆನಡಾಗೆ ಪ್ರಯಾಣಿಸುವವರುಮೂರನೇ ದೇಶದಿಂದ ಕೋವಿಡ್‌ ಪರೀಕ್ಷೆಯ ನೆಗೆಟಿವ್‌ ವರದಿಯನ್ನು ಪಡೆದಿರಬೇಕು’ ಎಂದು ಅವರು ತಿಳಿಸಿದ್ದಾರೆ.

‘ಈ ಹಿಂದೆ ಕೋವಿಡ್‌ ಸೋಂಕು ದೃಢಪಟ್ಟ ಪ್ರಯಾಣಿಕರು ನೆಗೆಟಿವ್‌ ಪ್ರಮಾಣಪತ್ರದ ಬದಲು ದೇಶದಿಂದ ಹೊರಡುವ 14 ರಿಂದ 90 ದಿನಗಳೊಳಗೆ ನಡೆಸಿದ ಕೋವಿಡ್‌ ಪರೀಕ್ಷೆಯ ಪುರಾವೆಯನ್ನು ಒದಗಿಸಬೇಕು. ಈ ಪುರಾವೆಯನ್ನು ಕೆನಡಾಗೆ ತೆರಳುವ ಮೊದಲು ಮೂರನೇ ದೇಶದಿಂದ ಪಡೆಯಬೇಕು. ಅಲ್ಲದೆ ಆ ಮೂರನೇ ದೇಶದಲ್ಲಿ ಕನಿಷ್ಠ 14 ದಿನಗಳ ಕಾಲ ಉಳಿಯಬೇಕಾಗಬಹುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT