ಬುಧವಾರ, ಡಿಸೆಂಬರ್ 2, 2020
26 °C
ವಾರಾಣಸಿಯ ಅನ್ನಪೂರ್ಣ ದೇವತೆಯ ವಿಗ್ರಹ

ಭಾರತದಿಂದ ಕಳವಾಗಿದ್ದ ವಿಗ್ರಹವನ್ನು ಮರಳಿಸಲಿರುವ ಕೆನಡಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೊರಾಂಟೊ: ಶತಮಾನದ ಹಿಂದೆ ಭಾರತದಿಂದ ಕಳವಾಗಿದ್ದ ಅನ್ನಪೂರ್ಣ ದೇವತೆಯ ವಿಗ್ರಹ, ಈಗ ಕೆನಡಾ ರೆಜಿನ್‌ ವಿಶ್ವವಿದ್ಯಾಲಯದ ಮೆಕೆಂಜಿ ಆರ್ಟ್‌ ಗ್ಯಾಲರಿಯಲ್ಲಿ ಪತ್ತೆಯಾಗಿದ್ದು, ಅದನ್ನು ಶೀಘ್ರವೇ ಆ ದೇಶಕ್ಕೆ ಹಿಂತಿರುಗಿಸುವುದಾಗಿ  ವಿವಿ ಪ್ರಕಟಣೆ ತಿಳಿಸಿದೆ.

ವಾರಾಣಸಿಯ ದೇವಾಲಯದಿಂದ ಕಳವಾಗಿದ್ದ ಈ ವಿಗ್ರಹವನ್ನು ರೆಜಿನಾ ವಿಶ್ವವಿದ್ಯಾಲಯದ ಮೆಕೆಂಜಿ ಆರ್ಟ್‌ ಗ್ಯಾಲರಿಯಲ್ಲಿತ್ತು.

‘ಇದು ಶತಮಾನದ ಹಿಂದೆ ಭಾರತದಿಂದ ಕಳವಾಗಿರುವ ವಿಗ್ರಹ ಎಂಬ ಮಾಹಿತಿಯನ್ನು ಕಲಾವಿದೆ ದಿವ್ಯಾ ಮೆಹ್ರಾ ಅವರು ನಮ್ಮ ಗಮನಕ್ಕೆ ತಂದರು. ನಂತರ ಈ ವಿಗ್ರಹವನ್ನು ಭಾರತಕ್ಕೆ ಹಿಂತಿರುಗಿಸಲು ತೀರ್ಮಾನಿಸಿದ್ದೇವೆ’ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ಗುರುವಾರ ತಿಳಿಸಿದೆ.

‘ಈ ವಿಗ್ರಹ ವಾಪಸ್ ನೀಡುವ ವಿಚಾರವನ್ನು ವಿಶ್ವವಿದ್ಯಾಲಯದ ಹಂಗಾಮಿ ಅಧ್ಯಕ್ಷ ಮತ್ತು ಉಪ ಕುಲಪತಿ ಡಾ.ಥಾಮಸ್‌ ಚೇಸ್‌ ಅವರು ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್‌ ಅಜಯ್‌ ಬಿಸಾರಿಯಾ ಜೊತೆ ಚರ್ಚಿಸಿದ್ದರು. ನಂತರ ಇದೇ 19ರಂದು ವಿಗ್ರಹವನ್ನು ವಾಪಸ್ ನೀಡುವ ಸಮಾರಂಭ ಕೂಡ ನಡೆಯಿತು. ವರ್ಚುವಲ್‌ ಮೂಲಕ ನಡೆದ ಈ ಸಮಾರಂಭದಲ್ಲಿ ಮೆಕೆಂಜಿ ಆರ್ಟ್‌ ಗ್ಯಾಲರಿ ಹಾಗೂ ಕೆನಡಾ ಬಾರ್ಡರ್‌ ಸರ್ವಿಸಸ್‌ ಏಜೆನ್ಸಿಯ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.ಶೀಘ್ರದಲ್ಲೇ ಈ ವಿಗ್ರಹವನ್ನು ಭಾರತಕ್ಕೆ ತಲುಪಿಸುವುದಾಗಿ’ ವಿವಿ ಪ್ರಕಟಣೆ ಹೇಳಿದೆ. 

‘ಈ ವಿಗ್ರಹವನ್ನು ಭಾರತಕ್ಕೆ ಮರಳಿಸುತ್ತಿರುವ ರೆಜಿನಾ ವಿಶ್ವವಿದ್ಯಾಲಯದ ಕಾರ್ಯವು ಸ್ವಾಗತಾರ್ಹವಾದುದು. ಪುರಾತನವಾದ ಈ ವಿಗ್ರಹ ಶೀಘ್ರವೇ ಸ್ವದೇಶಕ್ಕೆ ವಾಪಾಸಾಗುತ್ತಿರುವುದು ಖುಷಿಯ ವಿಚಾರ’ ಎಂದು ಬಿಸಾರಿಯಾ ನುಡಿದಿದ್ದಾರೆ.  

‘1913ರ ಭಾರತ ಪ್ರವಾಸದ ವೇಳೆ ಈ ವಿಗ್ರಹವು ಮೆಕೆಂಜಿ ಅವರ ಕಣ್ಣಿಗೆ ಬಿದ್ದಿತ್ತು. ಈ ವಿಗ್ರಹ ತನಗೆ ತುಂಬಾ ಹಿಡಿಸಿದ್ದಾಗಿ ಅವರು ಆಪ್ತರ ಬಳಿ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡಿದ್ದ ಅಪರಿಚಿತರು ಗಂಗೆಯ ತಟದಲ್ಲಿದ್ದ ದೇವಸ್ಥಾನದಿಂದ ಆ ವಿಗ್ರಹವನ್ನು ಕದ್ದು ಮೆಕೆಂಜಿಗೆ ನೀಡಿದ್ದರು ಎಂಬ ಅಂಶವು ದಿವ್ಯಾ ಅವರ ಅಧ್ಯಯನದಿಂದ ತಿಳಿದುಬಂದಿತ್ತು. ಆ ಮಾಹಿತಿಯನ್ನು ಅವರು ನಮ್ಮೊಂದಿಗೂ ಹಂಚಿಕೊಂಡಿದ್ದರು’ ಎಂದೂ ವಿಶ್ವವಿದ್ಯಾಲಯದ ಪ್ರಕಟಣೆ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು