ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪದಿಂದಾಗಿ ತತ್ತರಿಸಿರುವ ಟರ್ಕಿ, ಸಿರಿಯಾದ ನಾಗರಿಕರ ನೋವು ಹೆಚ್ಚಿಸಿದ ಚಳಿ

ಟರ್ಕಿ–ಸಿರಿಯಾ ಭೂಕಂಪ: ಮೃತರ ಸಂಖ್ಯೆ 25 ಸಾವಿರಕ್ಕೆ ಏರಿಕೆ
Last Updated 11 ಫೆಬ್ರುವರಿ 2023, 15:35 IST
ಅಕ್ಷರ ಗಾತ್ರ

ಕಹ್ರಮನ್ಮರಸ್‌, ಟರ್ಕಿ: ಭೂಕಂಪದಿಂದಾಗಿ ತತ್ತರಿಸಿರುವ ಟರ್ಕಿ ಹಾಗೂ ಸಿರಿಯಾದ ನಾಗರಿಕರು ಈಗ ಕೊರೆಯುವ ಚಳಿಯಿಂದಾಗಿ ಮತ್ತಷ್ಟು ನಲುಗಿ ಹೋಗಿದ್ದಾರೆ. ಅಗೆದಷ್ಟು ಆಳದಲ್ಲಿ ಶವಗಳು ಪತ್ತೆಯಾಗುತ್ತಿದ್ದು, ಈವರೆಗೆ ಸುಮಾರು 25 ಸಾವಿರ ಮಂದಿ ಅಸುನೀಗಿದ್ದಾರೆ.

ಉಭಯ ದೇಶಗಳ ಕನಿಷ್ಠ 8.70 ಲಕ್ಷ ಮಂದಿಗೆ ತುರ್ತಾಗಿ ಆಹಾರ ಒದಗಿಸಬೇಕಾಗಿದೆ. ಭೂಕಂಪದಿಂದಾಗಿ ಸಿರಿಯಾವೊಂದರಲ್ಲೇ 53 ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಟರ್ಕಿಯ ಭೂಕಂಪ ಪೀಡಿತ ಪ್ರದೇಶದಿಂದ ಹೊಸದಾಗಿ 5.90 ಲಕ್ಷ ಹಾಗೂ ಸಿರಿಯಾದಿಂದ 2.84 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇವರಿಗೆ ಆಹಾರ ಧಾನ್ಯ ಪೂರೈಸುವುದಕ್ಕಾಗಿಯೇ ₹635.21 ಕೋಟಿ ನೆರವು ಒದಗಿಸುವಂತೆ ವಿಶ್ವಸಂಸ್ಥೆಯ ‘ವಿಶ್ವ ಆಹಾರ ಕಾರ್ಯಕ್ರಮ’ ಮನವಿ ಮಾಡಿದೆ.

ಕೊರೆಯುವ ಚಳಿಯು ಭೂಕಂಪ ಪೀಡಿತ ಪ್ರದೇಶದಲ್ಲಿನ ಜನರ ನೋವನ್ನು ಹೆಚ್ಚಿಸಿದೆ. ಚಳಿಯಿಂದ ರಕ್ಷಣೆ ಪಡೆಯಲು ಸಾವಿರಾರು ಮಂದಿ ತಮ್ಮ ಕಾರುಗಳಲ್ಲೇ ರಾತ್ರಿ ಕಳೆಯುವಂತಾಗಿದೆ. ಬೆಂಕಿ ಕಾಯಿಸುವುದೂ ಸಾಮಾನ್ಯವಾಗಿದೆ.

‘ಭೂಕಂಪನದಿಂದ ಜೀವ ಉಳಿಸಿಕೊಂಡಿರುವವರು ಈಗ ಚಳಿಯಿಂದ ಪ್ರಾಣ ಬಿಡುವಂತಾಗಿದೆ’ ಎಂದು ಟರ್ಕಿಯ ಅದಿಯಾಮನ್‌ ಪ್ರಾಂತ್ಯದ ನಿವಾಸಿ ಹಕನ್‌ ತನ್ರಿವರ್ದಿ ಎಂಬುವರು ನೋವು ವ್ಯಕ್ತಪಡಿಸಿದ್ದಾರೆ.

ದಶಕಗಳಿಂದ ನಡೆದ ನಾಗರಿಕ ದಂಗೆ ಹಾಗೂ ತನ್ನ ನಿಯಂತ್ರಣಕ್ಕೆ ಒಳಪಡದ ಪ್ರದೇಶಗಳಲ್ಲಿನ ವೈದ್ಯಕೀಯ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸಿರಿಯಾ–ರಷ್ಯಾ ಜಂಟಿಯಾಗಿ ನಡೆಸಿದ ವೈಮಾನಿಕ ಬಾಂಬ್‌ ದಾಳಿಯಿಂದಾಗಿ ಈಗಾಗಲೇ ಹಲವು ಆಸ್ಪತ್ರೆಗಳು ಧ್ವಂಸಗೊಂಡಿದ್ದು, ಸಿರಿಯಾದಲ್ಲಿ ವಿದ್ಯುತ್‌ ಹಾಗೂ ನೀರಿನ ಅಭಾವವೂ ಸೃಷ್ಟಿಯಾಗಿದೆ.

ಕಟ್ಟಡಗಳ ಕಳಪೆ ಕಾಮಗಾರಿ ಹಾಗೂ ತಮ್ಮ ಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದ ಟರ್ಕಿ ಸರ್ಕಾರದ ನಡೆ ನಾಗರಿಕರನ್ನು ಕೆರಳುವಂತೆ ಮಾಡಿದೆ.

‘ನಿರೀಕ್ಷಿಸಿದಷ್ಟು ತ್ವರಿತವಾಗಿ ನೆರವು ಒದಗಿಸುವಲ್ಲಿ ಹಾಗೂ ನಾಗರಿಕರ ನೋವಿಗೆ ಸ್ಪಂದಿಸುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ’ ಎಂದು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಹೇಳಿದ್ದಾರೆ.

ಭೂಕಂಪನದಿಂದಾಗಿ 12,141 ಕಟ್ಟಡಗಳು ಧ್ವಂಸಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಕ್ಸ್‌ಗಳು

110 ಗಂಟೆ ಅವಶೇಷಗಳಡಿ ಸಿಲುಕಿದ್ದ ಮೂವರ ರಕ್ಷಣೆ

ಬೈರೂತ್ (ರಾಯಿಟರ್ಸ್‌): ಸಿರಿಯಾ ನಗರದ ಜಬಲೆಹ್‌ ಎಂಬಲ್ಲಿ 110 ಗಂಟೆಗಳವರೆಗೆ ಕಟ್ಟಡವೊಂದರ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ.

ಸಿರಿಯಾ ಹಾಗೂ ಲೆಬನಾನ್‌ನ ರಕ್ಷಣಾ ಪಡೆಗಳ ಸದಸ್ಯರು ತಾಯಿ ಮತ್ತು ಮಗು ಸೇರಿದಂತೆ ಮೂವರನ್ನು ಅವಶೇಷಗಳ ಅಡಿಯಿಂದ ಹೊರ ತೆಗೆಯುತ್ತಿದ್ದಂತೆ ನೆರೆದಿದ್ದರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ‘ದೇವರು ದೊಡ್ಡವನು’ ಎಂಬ ಘೋಷಣೆ ಕೂಗಿದರು.

ರಕ್ಷಿಸಲ್ಪಟ್ಟಿದ್ದ ಮಹಿಳೆ ಸಾವು

ಕಿರಿಖಾನ್‌, ಟರ್ಕಿ (ರಾಯಿಟರ್ಸ್‌): ‘ದಕ್ಷಿಣ ಟರ್ಕಿಯಲ್ಲಿ 104 ಗಂಟೆವರೆಗೆ ಕಟ್ಟಡವೊಂದರ ಅವಶೇಷಗಳ ಅಡಿ ಸಿಲುಕಿದ್ದ ಮಹಿಳೆಯೊಬ್ಬರನ್ನು ಶುಕ್ರವಾರ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಶನಿವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ’ ಎಂದು ರಕ್ಷಣಾ ಪಡೆಯವರು ಹೇಳಿದ್ದಾರೆ.

‘40 ವರ್ಷದ ಝೆಯನೆಪ್‌ ಕಹ್ರಮನ್‌ ಎಂಬುವರನ್ನು ನಾವು ರಕ್ಷಿಸಿದ್ದೆವು. ಅವರು ಮೃತಪಟ್ಟಿರುವುದು ದುರದೃಷ್ಟಕರ’ ಎಂದು ಜರ್ಮನಿಯ ಅಂತರರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡದ ಮುಖ್ಯಸ್ಥ ಸ್ಟೀವನ್‌ ಬೇಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT