ಚೀನಾದಲ್ಲಿ 2022ರಲ್ಲಿ 1.2 ಕೋಟಿ ಹೊಸ ಉದ್ಯೋಗ ಸೃಷ್ಟಿ: ವರದಿ

ಬೀಜಿಂಗ್: ಚೀನಾದಲ್ಲಿ 2022ರಲ್ಲಿ ಬರೋಬ್ಬರಿ 1.2 ಕೋಟಿಯಷ್ಟು ಹೊಸ ನಗರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಕೋವಿಡ್‌ನಿಂದಾಗಿ ಆರ್ಥಿಕತೆ ಮೇಲೆ ಹೊಡೆತ ಬಿದ್ದಿರುವುದರ ಹೊರತಾಗಿಯೂ ಸರ್ಕಾರ ತನ್ನ ವಾರ್ಷಿಕ ಗುರಿಯನ್ನು ಸಾಧಿಸಿದೆ ಎಂದು ಅಲ್ಲಿನ ಮಾನವ ಸಂಪನ್ಮೂಲ ಸಚಿವರು ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋವಿಡ್ ಮುನ್ನಾ ವರ್ಷವಾದ 2019ರಲ್ಲಿ ದೇಶದಲ್ಲಿ 1.35 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು. ನಂತರ 2020ರಲ್ಲಿ 1.18 ಕೋಟಿ ಮತ್ತು 2021ರಲ್ಲಿ 1.26 ಕೋಟಿಯಷ್ಟು ಉದ್ಯೋಗಗಳು ನಗರ ಪ್ರದೇಶಗಳಲ್ಲಿ ಸೃಷ್ಟಿಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋವಿಡ್‌ನಿಂದ ಸೇವೆ ಮತ್ತು ಉತ್ಪಾದಕ ವಲಯಕ್ಕೆ ಪೆಟ್ಟು ಬಿದ್ದಿರುವ ಸಮಯದಲ್ಲಿ, ಸರ್ಕಾರದ ನೀತಿ ನಿರೂಪಕರುಗಳು ಉದ್ಯೋಗ ಮಾರುಕಟ್ಟೆಯ ಸ್ಥಿರತೆಗೆ ಆದ್ಯತೆ ನೀಡಿರುವುದು, ಆರ್ಥಿಕತೆಯ ಸಮರ್ಥ ನಿರ್ವಹಣೆಗೆ ನೆರವಾಗಿದೆ ಎಂದೂ ಹೇಳಲಾಗಿದೆ.
ನಿಧಾನಗತಿಯ ಆರ್ಥಿಕ ಬೆಳವಣಿಗೆ, ಆಗಾಗ್ಗೆ ತೀವ್ರವಾಗಿ ಹರಡುತ್ತಿರುವ ಕೋವಿಡ್, ಬದಲಾಗುತ್ತಿರುವ ಸಂಕೀರ್ಣ ಪರಿಸ್ಥಿತಿಯ ನಡುವೆಯೂ ಚೀನಾದ ಉದ್ಯೋಗ ಸೃಷ್ಟಿಯು ಸ್ಥಿರತೆ ಕಾಯ್ದುಕೊಂಡಿದೆ ಎಂದು ಸಚಿವ ವಾಂಗ್ ಕ್ಸಿಯಾಪಿಂಗ್ ತಿಳಿಸಿದ್ದಾರೆ.
ಚೀನಾದ ಉದ್ಯೋಗ ಮಾರುಕಟ್ಟೆಯ ಸ್ಥಿರತೆಯು 2023ರಲ್ಲಿಯೂ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ವಾಂಗ್, ಅದಕ್ಕೆ ಸಾಕಷ್ಟು ಸವಾಲುಗಳಿವೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಹಾಗೆಯೇ, ಉದ್ಯೋಗ ಸೃಷ್ಟಿಯ ಮೂಲವಾಗಿರುವ ಸೇವಾ ವ್ಯವಹಾರಗಳು ಮತ್ತು ಸಣ್ಣ ಉದ್ಯಮಗಳಿಗೆ ಬೆಂಬಲ ನೀಡುವುದನ್ನು ಚೀನಾ ಮುಂದುವರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
2023ರಲ್ಲಿ 1.15 ಕೋಟಿ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಲಿದ್ದಾರೆ. ಇದು ದಾಖಲೆಯಾಗಿದೆ. ಯುವಕರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವಾಗುವುದೇ ನಮ್ಮ ಮೊದಲ ಆದ್ಯತೆ ಎಂದೂ ಅವರು ಒತ್ತಿಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.