ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜೊತೆಗಿನ ತಮ್ಮ ಸಂಬಂಧದ ವಿಷಯವಾಗಿ ಮೂಗು ತೂರಿಸಬೇಡಿ: ಅಮೆರಿಕಕ್ಕೆ ಚೀನಾ

Last Updated 30 ನವೆಂಬರ್ 2022, 4:56 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ ಜೊತೆಗಿನ ತಮ್ಮ ಸಂಬಂಧದ ವಿಷಯವಾಗಿ ಮೂಗು ತೂರಿಸಬೇಡಿ ಎಂದು ಚೀನಾ, ಅಮೆರಿಕಕ್ಕೆ ಎಚ್ಚರಿಸಿದೆ ಎಂದು ಪೆಂಟಗನ್ ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

‘ಅಮೆರಿಕ ಜೊತೆ ಭಾರತ ಹೆಚ್ಚು ಆಪ್ತತೆ ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಗಡಿ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುವತ್ತ ಚೀನಾ ಗಮನ ಹರಿಸುತ್ತಿದೆ. ಪಿಆರ್‌ಸಿ(ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಸಂಘರ್ಷದ ಗಂಭೀರತೆಯನ್ನು ತಗ್ಗಿಸಲು ಪ್ರಯತ್ನಿಸಿತು. ಪಿಆರ್‌ಸಿ ಅಧಿಕಾರಿಗಳು ತಮ್ಮ ಮತ್ತು ಭಾರತದ ಜೊತೆಗಿನ ಸಂಬಂಧದಲ್ಲಿ ಮೂಗು ತೂರಿಸದಂತೆ ಅಮೆರಿಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಪೆಂಟಗನ್ ವರದಿಯಲ್ಲಿ ತಿಳಿಸಿದೆ.

2021ರಲ್ಲಿ ಚೀನಾ-ಭಾರತದ ಗಡಿಯ ಉದ್ದಕ್ಕೂ ಪಿಎಲ್‌ಎ ಪಡೆಗಳ ನಿಯೋಜನೆ ಇತ್ತು. ಎಲ್‌ಎಸಿ ಉದ್ದಕ್ಕೂ ಮೂಲಸೌಕರ್ಯಗಳನ್ನು ನಿರ್ಮಿಸುವ ಕಾರ್ಯ ಮುಂದುವರೆಸಿದೆ. ಗಡಿಯಲ್ಲಿ ತಮಗೆ ಆಗುವ ಅನುಕೂಲಗಳನ್ನು ಕಳೆದುಕೊಳ್ಳುವುದನ್ನು ಎರಡೂ ಕಡೆಯವರು ವಿರೋಧಿಸಿದ್ದರಿಂದ ಮಾತುಕತೆಯು ಕನಿಷ್ಠ ಪ್ರಗತಿಯನ್ನು ಸಾಧಿಸಿದೆ ಎಂದು ಅದು ಹೇಳಿದೆ.

ಮೇ 2020ರಿಂದ ಆರಂಭಗೊಂಡು, ಎಲ್‌ಎಸಿ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಕಲ್ಲುಗಳು, ಲಾಠಿಗಳನ್ನು ಹಿಡಿದು ಚೀನಾ ಮತ್ತು ಭಾರತೀಯ ಪಡೆಗಳು ಘರ್ಷಣೆಯಲ್ಲಿ ಭಾಗಿಯಾದವು. ಇದರ ಪರಿಣಾಮ, ಗಡಿಯ ಎರಡೂ ಬದಿಗಳಲ್ಲಿ ಸೇನೆಯ ನಿಯೋಜನೆಗೆ ಪ್ರಚೋದಿಸಿತು ಎಂದು ಪೆಂಟಗನ್ ವರದಿಯಲ್ಲಿ ತಿಳಿಸಲಾಗಿದೆ.

‘ಎರಡೂ ದೇಶಗಳು ಸೇನಾಪಡೆ ಹಿಂತೆಗೆದುಕೊಳ್ಳುವಂತೆ ಪರಸ್ಪರ ವಾದಕ್ಕೆ ಇಳಿದವು. ಬಳಿಕ ಮತ್ತದೇ ಪರಿಸ್ಥಿತಿ ಮುಂದುವರಿದಿತ್ತು. ಚೀನಾ ಅಥವಾ ಭಾರತ ಯಾವ ದೇಶವೂ ಷರತ್ತುಗಳಿಗೆ ಸೊಪ್ಪು ಹಾಕಲಿಲ್ಲ ಎಂದು ತಿಳಿಸಲಾಗಿದೆ.

‘ಭಾರತದ ಕಡೆಯಿಂದ ಮೂಲಸೌಕರ್ಯ ಅಭಿವೃದ್ಧಿಯನ್ನು ಟೀಕಿಸಿದ ಚೀನಾ, ಭಾರತವು ಪಿಆರ್‌ಸಿ ಪ್ರದೇಶವನ್ನು ಆಕ್ರಮಿಸಿದೆ ಎಂದು ಆರೋಪಿಸಿತ್ತು. ಇದೇವೇಳೆ, ಚೀನಾ ಆಕ್ರಮಣಕಾರಿಯಾಗಿ ತಮ್ಮ ಪ್ರದೇಶಕ್ಕೆ ಅತಿಕ್ರಮಿಸುತ್ತಿದೆ’ ಎಂದು ಭಾರತವು ಆರೋಪಿಸಿದೆ ಎಂದು ಅದು ಹೇಳಿದೆ.

2020ರ ಸಂಘರ್ಷದ ನಂತರ ಚೀನಾ, ನಿರಂತರವಾಗಿ ಸೇನೆ ನಿಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT