ಭಾನುವಾರ, ಜನವರಿ 16, 2022
28 °C

ಭಾರತದಿಂದ ಅಲ್ಲ, ದೇಶದೊಳಗಿನ ಧಾರ್ಮಿಕ ಉಗ್ರವಾದದಿಂದ ನಮಗೆ ಅಪಾಯ: ಪಾಕ್ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ದೇಶದಲ್ಲಿ ಬೇರು ಬಿಟ್ಟಿರುವ ಧಾರ್ಮಿಕ ಉಗ್ರವಾದಕ್ಕೆ ಶಾಲೆ, ಕಾಲೇಜುಗಳೇ ಕಾರಣ. ಮದರಸಗಳಲ್ಲ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.

ಭಯೋತ್ಪಾದನೆ ಕುರಿತು ನಗರದಲ್ಲಿ ನಡೆದ ಸಮಾಲೋಚನಾ ಸಮಾವೇಶದಲ್ಲಿ ಮಾತನಾಡಿದ ಚೌಧರಿ, ದೇಶದಲ್ಲಿ ಉಗ್ರವಾದದ ಪ್ರಚಾರ ಮಾಡುವ ಸಲುವಾಗಿಯೇ 80 ಮತ್ತು 90ರ ದಶಕದಲ್ಲಿ ಬೋಧಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಭಾರತ, ಯುಎಸ್ ಅಥವಾ ಇನ್ಯಾವ ದೇಶಗಳಿಂದಲೂ ಪಾಕಿಸ್ತಾನಕ್ಕೆ ಬೆದರಿಕೆ ಇಲ್ಲ. ಆದರೆ, ದೇಶದೊಳಗೇ ಇರುವ ಧಾರ್ಮಿಕ ಉಗ್ರವಾದದಿಂದ ಅಪಾಯ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶಕ್ಕೆ ಸಹಿಷ್ಣುತೆಯ ಸಮಾಜದ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಚೌಧರಿ, 'ವಿರುದ್ಧ ದೃಷ್ಟಿಕೋನ ಹೊಂದಿರುವವರನ್ನು ಕುರ್ಫ್‌ (ಧರ್ಮದ್ರೋಹಿ) ಎಂದು ತಕ್ಷಣವೇ ನಿರ್ಧರಿಸುವ ಸಮಾಜವನ್ನು ನೀವು ಪೋಷಿಸಿದರೆ, ವಿಭಿನ್ನ ದೃಷ್ಟಿಕೋನವನ್ನು ಒಪ್ಪಿಕೊಳ್ಳಲು ಅಥವಾ ಅದಕ್ಕೆ ಅವಕಾಶ ಕಲ್ಪಿಸಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.

‘ಇಲ್ಲಿನ (ಪಾಕಿಸ್ತಾನದ) ಪ್ರದೇಶಗಳು ಹಿಂದೆಂದೂ ಧಾರ್ಮಿಕ ಉಗ್ರವಾದವನ್ನು ಹೊಂದಿರಲಿಲ್ಲ. ಸದ್ಯ ಗೋಚರವಾಗುತ್ತಿದೆ. ಇದು ದೇಶದೊಳಗೆ ನಾವು ಎದುರಿಸುತ್ತಿರುವ ಅತಿದೊಡ್ಡ ಸಂಕಷ್ಟವಾಗಿದೆ‘ ಎಂದು ತಿಳಿಸಿದ್ದಾರೆ.

ಉಗ್ರವಾದಕ್ಕೆ ಪಾಕಿಸ್ತಾನವನ್ನು ನಾಶಮಾಡುವ ಸಾಮರ್ಥ್ಯವಿದೆ ಎಂದು ವಿವರಿಸಿರುವ ಅವರು, 'ಭಾರತದಿಂದ ನಮಗೆ ಯಾವುದೇ ರೀತಿಯ ಸಂಭಾವ್ಯ ಅಪಾಯಗಳಿಲ್ಲ. ನಾವು ವಿಶ್ವದಲ್ಲೇ ಆರನೇ ಬಲಿಷ್ಠ ಸೇನೆಯನ್ನು ಹೊಂದಿದ್ದೇವೆ. ನಾವು ಪರಮಾಣು ಶಕ್ತಿ ಹೊಂದಿದ್ದೇವೆ ಮತ್ತು ಭಾರತ ನಮ್ಮೊಂದಿಗೆ ಸ್ಪರ್ಧಿಸಲಾರದು. ನಮಗೆ ಅಮೆರಿಕದಿಂದಲೂ ಯಾವುದೇ ಅಪಾಯವಿಲ್ಲ. ಯುರೋಪ್‌ನಿಂದಲೂ ಭೀತಿ ಎದುರಿಸುತ್ತಿಲ್ಲ. ನಮಗೆ ದೇಶದೊಳಗೆಯೇ ಅತಿದೊಡ್ಡ ಅಪಾಯ ಎದುರಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು