ರೂಪಾಂತರ ಕೋವಿಡ್: ಏಷ್ಯಾ–ಪೆಸಿಫಿಕ್ ವಲಯಕ್ಕೆ ಹರಡುವ ಭೀತಿ

ವಿಶ್ವಸಂಸ್ಥೆ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 ರೂಪಾಂತರ ವೈರಸ್, ನಿರಾಶ್ರಿತರು ಸೇರಿದಂತೆ, ಭಾರತದ ಉಪ ವಲಯದಲ್ಲಿ ವೇಗವಾಗಿ ಹರಡುತ್ತಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ 'ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ತಿಳಿಸಿದ್ದು, ಏಷ್ಯಾ –ಪೆಸಿಫಿಕ್ ವಲಯದಲ್ಲಿ ಲಸಿಕೆ ಕೊರತೆಯಾಗಿರುವ ಬಗ್ಗೆಯೂ ಎಚ್ಚರಿಕೆ ನೀಡಿದೆ.
ಜಿನೀವಾದಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಯುಎನ್‌ಎಚ್‌ಸಿಆರ್ ವಕ್ತಾರ ಆಂಡ್ರೆಜ್ ಮಹೇಸಿಕ್, ‘ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿರುವ ಅನೇಕ ರಾಷ್ಟ್ರಗಳಲ್ಲಿ ಆರೋಗ್ಯ ಸೌಕರ್ಯಗಳು ದುರ್ಬವಲವಾಗಿರುವ ಕಾರಣ, ಕೊರೊನಾ ಸೋಂಕು ನಿರ್ವಹಿಸಲು ಹರಸಾಹಸಪಡುತ್ತಿದ್ದಾರೆ‘ ಎಂದು ಹೇಳಿದರು.
‘ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ, ಕಳೆದ ಎರಡು ತಿಂಗಳಲ್ಲಿ ಈ ಏಷ್ಯಾ – ಪೆಸಿಫಿಕ್ ವಲಯದಲ್ಲಿ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆ ವಲಯದ ಪರಿಸ್ಥಿತಿಯ ಬಗ್ಗೆ ನಮಗೆ ತುಂಬಾ ಚಿಂತೆಗೀಡುಮಾಡಿದೆ‘ ಎಂದು ಅವರು ತಿಳಿಸಿದರು.
ಈ ಎರಡು ತಿಂಗಳಲ್ಲಿ ಸುಮಾರು 3.8 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. 5 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದರು.
ಕೋವಿಡ್ -19 ‘ಡೆಲ್ಟಾ ರೂಪಾಂತರ’ ವೈರಸ್ ಅತ್ಯಂತ ‘ಕಳವಳಕಾರಿ’: ಡಬ್ಲ್ಯುಎಚ್ಓ
‘ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ, ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ, ಸೀಮಿತ ತೀವ್ರ ನಿಗಾ ಘಟಕಗಳು (ಐಸಿಯು) ಮತ್ತು ವಿರಳ ಆರೋಗ್ಯ ಸೌಲಭ್ಯಗಳು, ಇಂಥ ಹಲವು ಕೊರತೆಯ ಕಾರಣಗಳಿಂದಾಗಿ ಭಾರತ ಮತ್ತು ನೇಪಾಳದಲ್ಲಿನ ಕೋವಿಡ್ 19 ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಭಾರತದಲ್ಲಿ ಮೊದಲು ಹೊರಹೊಮ್ಮಿದ ಕೋವಿಡ್ 19 ರೂಪಾಂತರ ವೈರಸ್ ನಿರಾಶ್ರಿತರ ಜನರನ್ನೂ ಒಳಗೊಂಡಂತೆ, ಏಷ್ಯಾ ಉಪ – ವಲಯದಲ್ಲಿ ವೇಗವಾಗಿ ಹರಡುವ ಅಪಾಯವಿದೆ‘ ಎಂದು ಮಹೇಸಿಕ್ ಎಚ್ಚರಿಸಿದರು.
ವೈದ್ಯಕೀಯ ವ್ಯವಸ್ಥೆ ಮೇಲೆ ಭಾರಿ ಒತ್ತಡ, ಮುಂಚೂಣಿ ಕಾರ್ಯಕರ್ತರಿಗೆ ಸಂಕಷ್ಟ: ವರದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.