ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದೆಲ್ಲೆಡೆ ಮತ್ತೆ ಏರುತ್ತಿದೆ ಕೋವಿಡ್‌

Last Updated 2 ಜುಲೈ 2021, 16:05 IST
ಅಕ್ಷರ ಗಾತ್ರ

ಪ್ಯಾರಿಸ್‌: ಲ್ಯಾಟಿನ್ ಅಮೆರಿಕವನ್ನು ಹೊರತುಪಡಿಸಿ ವಿಶ್ವದ ಎಲ್ಲಾ ಪ್ರದೇಶಗಳಲ್ಲಿ ಕೋವಿಡ್‌ ಈ ವಾರ ಮತ್ತೆ ವೇಗ ಪಡೆದುಕೊಂಡಿದೆ. ಸುದ್ದಿ ಸಂಸ್ಥೆ ಎಎಫ್‌ಪಿ ಸಂಗ್ರಹಿಸಿರುವ ದತ್ತಾಂಶವು ಇದನ್ನು ಪುಷ್ಟೀಕರಿಸುತ್ತಿದೆ.

ಕಳೆದ ವಾರ ಜಾಗತಿಕವಾಗಿ 3,77,000 ಕೋವಿಡ್ -19 ಪ್ರಕರಣಗಳು ವರದಿಯಾಗುವ ಮೂಲಕ ಏರಿಕೆಯ ಸೂಚನೆ ಲಭ್ಯವಾಗಿದ್ದು, ಏರಿಕೆ ಪ್ರಮಾಣ ಶೇ 2ರಷ್ಟಿದೆ ಎಂದು ಎಎಫ್‌ಪಿಯ ದತ್ತಾಂಶಗಳು ತಿಳಿಸುತ್ತಿವೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ಅತ್ಯಧಿಕ ಪ್ರಕರಣ... ಅಂದರೆ, 816,800 ಹೊಸ ದೈನಂದಿನ ಪ್ರಕರಣಗಳು ವರದಿಯಾಗಿದ್ದವು. ಅದರ ನಂತರ ಇಳಿಕೆ ಹಾದಿಯಲ್ಲಿದ್ದ ಕೋವಿಡ್‌ ಈಗ ಮತ್ತೊಮ್ಮೆ ಏರಲಾರಂಭಿಸಿದೆ.

ದೃಢೀಕೃತ ಪ್ರಕರಣಗಳು ವಾಸ್ತವ ಸಂಖ್ಯೆಯ ಒಂದು ಭಾಗವನ್ನು ಮಾತ್ರವೇ ಪ್ರತಿಬಿಂಬಿಸುತ್ತವೆ. ಕೋವಿಡ್‌ ಪತ್ತೆಗೆ ಒಂದೊಂದು ದೇಶ ಒಂದೊಂದು ರೀತಿಯ ಕ್ರಮ, ಪರೀಕ್ಷಾ ವಿಧಾನವನ್ನು ಅನುಸರಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಮಾತ್ರ ಈ ವಾರ ಸುಧಾರಣೆ ಕಂಡಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಶೇ 13 ಕಡಿಮೆ ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗವು ವಿಶ್ವದ ಇತರ ಕಡೆಗಳಲ್ಲಿ ಮತ್ತೆ ಏರಿದೆ. ಯುರೋಪಿನಲ್ಲಿ ಶೇ.30ರಷ್ಟು, ಆಫ್ರಿಕಾದಲ್ಲಿ ಶೇ 25ರಷ್ಟು, ಮಧ್ಯಪ್ರಾಚ್ಯದಲ್ಲಿ ಶೇ 10ರಷ್ಟು, ಅಮೆರಿಕ ಮತ್ತು ಕೆನಡಾದಲ್ಲಿ ಶೇ 5ರಷ್ಟು, ಏಷ್ಯಾದಲ್ಲಿ ಶೇ4ರಷ್ಟು ಏರಿಕೆ ಕಂಡು ಬಂದಿದೆ.

ಓಶಿಯಾನಿಯಾ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಶೇ 31ರಷ್ಟು ಅಧಿಕವಾಗಿದೆ. ಆದರೆ, ದಿನವೊಂದರಲ್ಲಿ ಆ ದೇಶಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ ಕೇವಲ 323 ಮಾತ್ರ.

ದೇಶಗಳ ಆಧಾರದಲ್ಲಿ ಹೇಳುವುದಾದರೆ, ಮ್ಯಾನ್ಮಾರ್‌ನಲ್ಲಿ ಶೇ 119ರಷ್ಟು ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸ್ಪೇನ್ ಶೇ 80, ಬ್ರಿಟನ್‌ನಲ್ಲಿ 71, ಟುನೀಶಿಯಾದಲ್ಲಿ ಶೇ 69, ಕ್ಯೂಬಾದಲ್ಲಿ ಶೇ 68 ರಷ್ಟು ಹೆಚ್ಚು ಈ ವಾರ ವರದಿಯಾಗಿವೆ.

ಪ್ರಕರಣಗಳ ಸಂಖ್ಯೆಯಲ್ಲಿ ಉರುಗ್ವೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲಿ ಪ್ರಕರಣಗಳು ಶೇ 35ರಷ್ಟು ಕಡಿಮೆಯಾಗಿದೆ. ನಂತರದ ಸ್ಥಾನಗಳಲ್ಲಿ ಉಗಾಂಡಾ ಶೇ 34, ಬ್ರೆಜಿಲ್ ಶೇ 30, ಚಿಲಿ ಶೇ –21, ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಶೇ –17 ರಷ್ಟು ವರದಿಯಾಗಿದೆ.

ಶೇ 30 ರಷ್ಟು ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದರೂ ಬ್ರೆಜಿಲ್‌ನಲ್ಲಿ ಕಳೆದ ವಾರ ದಿನದಲ್ಲಿ 54,100 ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಭಾರತ 47,000 ಪ್ರಕರಣಗಳನ್ನು ಕಂಡಿದ್ದರೆ, ಕೊಲಂಬಿಯಾದಲ್ಲಿ 29,900 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT