ಸೋಮವಾರ, ಮೇ 16, 2022
30 °C

ಒತ್ತೆಯಾಳಾಗಿದ್ದೇನೆ, ಜೀವಕ್ಕೆ ಅಪಾಯವಿದೆ ಎಂದ ದುಬೈ ಆಡಳಿತಗಾರನ ಮಗಳು ಶೇಖಾ ಲತೀಫಾ

ಎಎಫ್‍ಪಿ Updated:

ಅಕ್ಷರ ಗಾತ್ರ : | |

ಲಂಡನ್: ಫಲಾಯನ ಮಾಡಲು ವಿಫಲ ಯತ್ನದ ನಂತರ ತನ್ನನ್ನು ಸೆರೆಯಲ್ಲಿಡಲಾಗಿದೆ ಮತ್ತು ತನ್ನ ಜೀವಕ್ಕೆ ಅಪಾಯವಿದೆ ಎಂದು ದುಬೈ ಆಡಳಿತಗಾರನ ಮಗಳು ತಿಳಿಸಿರುವುದಾಗಿ ಮಂಗಳವಾರ ಪ್ರಸಾರವಾದ ದೃಶ್ಯಗಳಿಂದ ತಿಳಿದುಬಂದಿದೆ.

ಶೇಖಾ ಲತೀಫಾ ಅವರು 2018ರ ಮಾರ್ಚ್‌ನಲ್ಲಿ ಎಮಿರೇಟ್‌ನಿಂದ ಸಮುದ್ರದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಅಲ್ಲಿಂದ ಆಕೆಯನ್ನು ಸೆರೆಹಿಡಿದು ದುಬೈಗೆ ಹಿಂತಿರುಗಿದ ಸುಮಾರು ಒಂದು ವರ್ಷದ ನಂತರ ಬಿಬಿಸಿಯಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ ಆಕೇ ಸ್ನಾನಗೃಹ ಎಂದು ಹೇಳುವ ಒಂದು ಮೂಲೆಯಲ್ಲಿ ಇರುವುದನ್ನು ತೋರಿಸಲಾಗಿದೆ.

ವಿಡಿಯೊದಲ್ಲಿ, 'ನಾನು ಒತ್ತೆಯಾಳಾಗಿದ್ದೇನೆ ಮತ್ತು ಈ ವಿಲ್ಲಾವನ್ನು ಜೈಲಾಗಿ ಪರಿವರ್ತಿಸಲಾಗಿದೆ. ಮನೆಯೊಳಗೆ ಐದು ಪೊಲೀಸರು ಮತ್ತು ಇಬ್ಬರು ಮಹಿಳಾ ಪೊಲೀಸರು ಇದ್ದಾರೆ. ಪ್ರತಿದಿನವೂ ನನ್ನ ಸುರಕ್ಷತೆ ಮತ್ತು ಜೀವನದ ಬಗ್ಗೆ ನಾನು ಚಿಂತೆ ಮಾಡುತ್ತೇನೆ' ಎಂದು ಅವರು ಹೇಳಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ, ಲತಿಫಾ ತನ್ನ ಪರಿಸ್ಥಿತಿ 'ಪ್ರತಿದಿನ ಹೆಚ್ಚು ಹದಗೆಡುತ್ತಿದೆ. ಈ ಜೈಲು ವಿಲ್ಲಾದಲ್ಲಿ ನಾನು ಒತ್ತೆಯಾಳಾಗಿರಲು ಬಯಸುವುದಿಲ್ಲ. ನಾನು ಮುಕ್ತನಾಗಿರಲು ಬಯಸುತ್ತೇನೆ' ಎಂದು ಅವರು ಹೇಳುತ್ತಾರೆ.

ಬಿಬಿಸಿ ತನ್ನ ತನಿಖಾ ಸುದ್ದಿ ಕಾರ್ಯಕ್ರಮ 'ಪನೋರಮಾ' ಗಿಂತಲೂ ಮುಂಚಿತವಾಗಿ ವೀಡಿಯೊ ಆಯ್ದ ಭಾಗಗಳನ್ನು ಬಿಡುಗಡೆ ಮಾಡಿತು.

ಅಲ್ಲದೆ, ತನಗೆ ವಿಡಿಯೊಗಳು ಲಭ್ಯವಾಗಿವೆ ಆದರೆ ಕಳೆದ ಒಂಬತ್ತು ತಿಂಗಳಿನಿಂದ ಲತೀಫಾ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಕೇಳಿದ್ದಕ್ಕೆ ದುಬೈ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲತೀಫಾ ಅವರ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯಾಗಿದ್ದು, ಅದರಲ್ಲಿ ದುಬೈ ಒಂದು ಘಟಕವಾಗಿದೆ.

ದುಬೈನಲ್ಲಿ 'ಜೈಲುಪಾಲು'

ಲತೀಫಾರಿಂದ ರಹಸ್ಯ ಸಂದೇಶಗಳು ಬರುವುದು ನಿಂತಿವೆ ಎಂದು ಅವರ ಸ್ನೇಹಿತರು ಕಳವಳ ವ್ಯಕ್ತಪಡಿಸಿದ್ದರಿಂದ ವಿಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ಬಿಬಿಸಿ ತಿಳಿಸಿದೆ. ಈ ವಿಡಿಯೊಗಳು ಲತೀಫಾ ಅವರ ಫಿನ್ನಿಷ್ ಸ್ನೇಹಿತೆ ಟೀನಾ ಜುಹೈನೆನ್ ಅವರಿಂದ ಬಂದಿದ್ದು, ಅವರು ಕೂಡ ಸೆರೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಸಮಯದಲ್ಲಿ ಜೊತೆಯಲ್ಲಿದ್ದವರಾಗಿದ್ದರು. ಲತೀಫಾ ಎಲ್ಲಿದ್ದಾರೆ ಎಂಬ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಿದೆ ಎಂದು ಬಿಬಿಸಿ ಹೇಳಿದೆ.

2018 ರಲ್ಲಿ, ಲತೀಫಾ ಅವರು ಯುಎಇಯಿಂದ ಪಲಾಯನ ಮಾಡಲು ದೋಣಿಯಲ್ಲಿ ಪ್ರಯತ್ನಿಸಿದರು. ಆಗ ಭಾರತದ ಕರಾವಳಿಯಲ್ಲಿ ಕಮಾಂಡೋಗಳು ಅವರನ್ನು ತಡೆದರು ಎಂದು ಆಕೆಯ ಸಹಚರರು ಮತ್ತು ದುಬೈನಲ್ಲಿ ಬಂಧಿಸಲಾದ ಯುಕೆ ಮೂಲದ ಗುಂಪು ತಿಳಿಸಿದೆ.

'ನಾನು ವಿಹಾರ ನೌಕೆಯನ್ನು ಹಿಡಿದಿಟ್ಟುಕೊಂಡಿದ್ದೆ... ಅವರು ನನ್ನನ್ನು ಈಚೆಗೆ ಎಳೆಯುತ್ತಿದ್ದರು, ನಾನು ಸಾಧ್ಯವಾದಷ್ಟು ಕಷ್ಟಪಟ್ಟು ಹೋರಾಡುತ್ತಿದ್ದೆ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಹಳಷ್ಟು ಜನರ ವಿರುದ್ಧ ನಾನಿದ್ದೆ ಎಂದು ನೆನಪಿಸಿಕೊಳ್ಳುವ ಲತೀಫಾ, ಎಮಿರೇಟ್ಸ್‌ನ ವ್ಯಕ್ತಿಗಳು ಆಕೆಯ ಮೇಲೆ ಕುಳಿತು ಅವಳನ್ನು ಕಟ್ಟಿಹಾಕಲು ಪ್ರಯತ್ನಿಸಿದರು ಮತ್ತು ಅರಿವಳಿಕೆಯನ್ನು ನೀಡಿದರು ಎಂದು ಹೇಳುತ್ತಾರೆ.

ದುಬೈ ಸರ್ಕಾರದ ಮೂಲವೊಂದು ಆಕೆಯನ್ನು 'ಮರಳಿ ಕರೆತರಲಾಯಿತು' ಮತ್ತು ಯುಎಇ ಲತೀಫಾ ಅವರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿ, ಆಕೆಗೆ 'ಅಗತ್ಯವಿರುವ ಆರೈಕೆ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ' ಎಂದು ಹೇಳಿದೆ.

ಇನ್ನು ವಿಲ್ಲಾಕ್ಕೆ ಸ್ಥಳಾಂತರಿಸುವ ಮೊದಲು 2018ರ ಮೇವರೆಗೆ ದುಬೈನ ಅಲ್-ಅವೀರ್ ಕೇಂದ್ರ ಕಾರಾಗೃಹದಲ್ಲಿ ಸುಮಾರು ಮೂರು ತಿಂಗಳ ಕಾಲ ಅವರನ್ನು ಬಂಧಿಸಲಾಗಿತ್ತು ಎಂದು ಲತೀಫಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು