ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್‌ನಲ್ಲಿ ಕ್ರೀಡಾ ಸೌಕರ್ಯ ಅಭಿವೃದ್ಧಿಗೆ ಭಾರತ ಸಹಭಾಗಿತ್ವ: ಜೈಶಂಕರ್‌

ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹3,200 ಕೋಟಿ ರಿಯಾಯಿತಿ ಸಾಲದ ನೆರವು
Last Updated 19 ಜನವರಿ 2023, 14:36 IST
ಅಕ್ಷರ ಗಾತ್ರ

ಮಾಲೆ : ಮಾಲ್ಡೀವ್ಸ್‌ನಲ್ಲಿ ಕ್ರೀಡಾ ಮೂಲಸೌರ್ಕಯಗಳ ಅಭಿವೃದ್ಧಿಗಾಗಿ ಭಾರತವು ಸುಮಾರು ₹3,200 ಕೋಟಿಗೆ ರಿಯಾಯಿತಿ ಸಾಲದ ನೆರವು ವಿಸ್ತರಿಸಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಗುರುವಾರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖವಾದ ‘ಫಿಟ್ ಇಂಡಿಯಾ’ ಮತ್ತು ‘ಖೇಲೊ ಇಂಡಿಯಾ’ ಯೋಜನೆಗಳನ್ನು ನೆರೆಯ ದೇಶಗಳಿಗೂ ನೀಡುವ ಮೊದಲ ವಿದೇಶಿ ನೀತಿಯ ಭಾಗವಾಗಿ ಮಾಲ್ಡೀವ್ಸ್‌ನಲ್ಲಿ ಕ್ರೀಡಾಸೌಕರ್ಯ ಅಭಿವೃದ್ಧಿಗೆ ನೆರವಾಗುತ್ತಿದ್ದೇವೆ ಎಂದು ಅವರು ಹೇಳಿದರು.

ನೆರೆ ರಾಷ್ಟ್ರಗಳಾದ ಮಾಲ್ಡೀವ್ಸ್‌ ಮತ್ತು ಶ್ರೀಲಂಕಾ ಜತೆ ದ್ವಿ‍ಪಕ್ಷೀಯ ‍ಬಾಂಧವ್ಯ ಬಲವರ್ಧನೆಯ ಮಾತುಕತೆಗಾಗಿ ಜೈಶಂಕರ್‌ ಮೂರು ದಿನಗಳ ಭೇಟಿ ಕೈಗೊಂಡಿದ್ದಾರೆ.

ಇದೇ ವೇಳೆ ಜೈಶಂಕರ್‌ ಮತ್ತು ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಶಾವಿಯಾನಿ ಫೋಕೈಡೋದಲ್ಲಿ ಭಾರತದ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಸಮುದಾಯ ಕೇಂದ್ರವನ್ನು ಉದ್ಘಾಟಿಸಿದರು.

‘ಭಾರತ ಮತ್ತು ಮಾಲ್ಡೀವ್ಸ್ ನಡುವೆ ತುಂಬಾ ವಿಶೇಷವಾದ ಸಂಬಂಧವಿದೆ. ಭಾರತ ನಮಗೆ ಉತ್ತಮ, ವಿಶೇಷ ಹಾಗೂ ವಿಶ್ವಾಸಾರ್ಹ ನೆರೆ ರಾಷ್ಟ್ರ’ ಎಂದು ಅಬ್ದುಲ್ಲಾ ಶಾಹಿದ್ ಬಣ್ಣಿಸಿದರು.

ಹನಿಮಾಧೂ ಪುನರಾಭಿವೃದ್ಧಿಗೆ ಶಂಕುಸ್ಥಾ‍ಪನೆ:

ಭಾರತದ ಸಹಭಾಗಿತ್ವದಲ್ಲಿ ಮಾಲ್ಡೀವ್ಸ್‌ನ ಹನಿಮಾಧೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪುನರಾಭಿವೃದ್ಧಿಗೆ ಬುಧವಾರ ಸಚಿವ ಎಸ್. ಜೈಶಂಕರ್ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಶಂಕುಸ್ಥಾಪನೆ ನೆರವೇರಿಸಿದರು.

‘ಉಭಯ ರಾಷ್ಟ್ರಗಳ ಅಭಿವೃದ್ಧಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಪುನರಾಭಿವೃದ್ಧಿಯು ಐತಿಹಾಸಿಕ ಮೈಲಿಗಲ್ಲು. ಉಭಯತ್ರರ ಸಹಭಾಗಿತ್ವವು ಪರಸ್ಪರರ ಕಲ್ಯಾಣ ಮತ್ತು ಹಿತಾಸಕ್ತಿಗಳಿಗಾಗಿ ಒಟ್ಟಾಗಿ ಕೆಲಸ ಮಾಡುವ ಬಯಕೆ ಹೊಂದಿದೆ’ ಎಂದು ಜೈಶಂಕರ್‌ ಹೇಳಿದರು.

ಠಾಕೂರುರುಫಾನು ಸ್ಮಾರಕಕ್ಕೆ ಗೌರವ:

16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ಮಾಲ್ಡೀವ್ಸ್‌ ರಾಷ್ಟ್ರೀಯ ನಾಯಕ, ಸುಲ್ತಾನ್ ಮೊಹಮ್ಮದ್ ಠಾಕೂರುರುಫಾನು ಅವರ ಸ್ಮಾರಕಕ್ಕೆ ಜೈಶಂಕರ್‌ ಗುರುವಾರ ಗೌರವ ಸಲ್ಲಿಸಿದರು.

1573ರಿಂದ 1585ರವರೆಗೆ ದೇಶ ಆಳಿದ ಠಾಕೂರುರುಫಾನು ಅವರ ವಿಜಯವನ್ನು ಮಾಲ್ಡೀವ್ಸ್‌ನಲ್ಲಿ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ.

ಮಾಲ್ಡೀವ್ಸ್‌ ಪ್ರವಾಸ ಪೂರ್ಣಗೊಳಿಸಿದ ಜೈಶಂಕರ್‌, ಗುರುವಾರ ಸಂಜೆ ನೆರೆಯ ಮತ್ತೊಂದು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT