ಬರ್ಲಿನ್: ಯುರೋಪ್‌ನ ಹಲವು ದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪಶ್ಚಿಮ ಜರ್ಮನಿ ಮತ್ತು ಬೆಲ್ಜಿಯಂನ ಕೆಲವು ಭಾಗಗಳಲ್ಲಿ ಕಂಡು ಬಂದಿರುವ ಭೀಕರ ಪ್ರವಾಹದಲ್ಲಿ ಕನಿಷ್ಠ 110 ಜನರು ಸಾವಿಗೀಡಾಗಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
‘ಜರ್ಮನಿಯ ರೈನ್‌ಲ್ಯಾಂಡ್ ಪಲಾಟಿನೇಟ್ ರಾಜ್ಯದಲ್ಲಿ ಸುಮಾರು 60 ಮಂದಿ ಪ್ರವಾಹದಲ್ಲಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಕನಿಷ್ಠ 9 ಮಂದಿ ಅಂಗವಿಕಲರು ಸೇರಿದ್ದಾರೆ. ಉತ್ತರ ರೈನ್–ವೆಸ್ಟ್‌ಫಾಲಿಯಾ ರಾಜ್ಯದಲ್ಲಿ ಒಟ್ಟು 43 ಮಂದಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1,300 ಮಂದಿ ಕಣ್ಮರೆ: ಜರ್ಮನಿಯಲ್ಲಿ ಸುಮಾರು 1,300 ಮಂದಿ ಕಾಣೆಯಾಗಿದ್ದಾರೆ. ರಸ್ತೆಗಳು ಜಲಾವೃತವಾಗಿದ್ದು, ಫೋನ್ ಸಂಪರ್ಕಕ್ಕೆ ಅಡ್ಡಿ ಎದುರಾಗಿದೆ. ಹಾಗಾಗಿ, ಸಂಕಷ್ಟದಲ್ಲಿರುವ ಜನರ ಬಳಿ ತಲುಪಲು ತೊಂದರೆಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಲ್ಜಿಯಂನಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿದ್ದು, 5 ಮಂದಿ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ನೆರವಿನ ಭರವಸೆ: ಭೀಕರ ಪ್ರವಾಹದಿಂದ ಆದ ವಿನಾಶಕ್ಕೆ ಜರ್ಮನಿಯ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೇನ್‌ಮಿಯರ್ ಅವರು ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಪ್ರವಾಹದಲ್ಲಿ ಸಾವಿಗೀಡಾದವರ ಕುಟುಂಬಗಳು ಮತ್ತು ಅಪಾರವಾಗಿ ಹಾನಿಗೀಡಾಗಿರುವ ನಗರ ಮತ್ತು ಪಟ್ಟಣಗಳಿಗೆ ನೆರವಿನ ಭರವಸೆ ನೀಡಿದ್ದಾರೆ.
‘ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೆ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲ ತೋರಬೇಕಾದದ್ದು ಅಗತ್ಯ’ ಎಂದು ಅವರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಚ್ಚರಿಕೆ: ‘ಹಮಾಮಾನ ವೈಪರೀತ್ಯದ ಕಾರಣದಿಂದ ಇಂತಹ ವಿಪತ್ತುಗಳು ಉಂಟಾಗುತ್ತಿವೆ’ ಎಂದು ತಜ್ಞರು ಎಚ್ಚರಿಸಿದ್ದಾರೆ.
‘ಪಶ್ಚಿಮ ಯುರೋಪಿನ ಕೆಲವು ಭಾಗಗಳಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ತಿಂಗಳಿಗಾಗುವಷ್ಟು ಪ್ರಮಾಣದ ಮಳೆಯಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ ತಡೆಯುವ ಪ್ರಯತ್ನಗಳನ್ನು ಚುರುಕುಗೊಳಿಸಬೇಕಾಗಿದೆ’ ಎಂದು ವಿಶ್ವ ಹವಾಮಾನ ಸಂಸ್ಥೆಯ ವಕ್ತಾರ ಕ್ಲೇರ್ ನುಲ್ಲಿಸ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.