ಗುರುವಾರ , ಆಗಸ್ಟ್ 11, 2022
24 °C

PV Web Exclusive | ಕ್ರಾಂತಿ ಬೀದಿಯ ಯುವತಿಯರು

ಹಮೀದ್‌ ಕೆ. Updated:

ಅಕ್ಷರ ಗಾತ್ರ : | |

ಕ್ರಾಂತಿ ಬೀದಿಯ ಯುವತಿಯರು

ಉಣ್ಣುವ, ಉಡುವಂತಹ ಮನದಾಳದ ಇಷ್ಟದ ವಿಚಾರಗಳು ಕೂಡ ಇನ್ಯಾರೋ ಹೇಳಿದ ಹಾಗೆ ಇರಬೇಕು ಎಂಬುದು ಬಂಧನ ಎಂಬ ಪರಿಕಲ್ಪನೆಯ ಇನ್ನೊಂದು ರೀತಿಯ ವ್ಯಾಖ್ಯೆ ಎನ್ನಬಹುದು. ಇದನ್ನೇ ತಿನ್ನು, ಹೀಗೆಯೇ ಬಟ್ಟೆ ತೊಡು ಎಂದು ಯಾರ ಮೇಲಾದರೂ ಒತ್ತಡ ಹೇರುವುದು ಶಿಲಾಯುಗ ಕಾಲದ ಮನಸ್ಥಿತಿಯಂತೆಯೂ ಕಾಣಬಹುದು. ಆದರೆ, ಏನನ್ನು ತಿನ್ನಬೇಕು ಮತ್ತು ಉಡುಪು ಹೇಗಿರಬೇಕು ಎಂಬ ವಿಚಾರದ ಜಟಾಪಟಿ ಈ ಆಧುನಿಕ ಯುಗದಲ್ಲಿಯೂ ಎಗ್ಗಿಲ್ಲದೆ ನಡೆಯುತ್ತಿದೆ. ಏನನ್ನೋ ತಿಂದರು ಎಂದು ಹೊಡೆದು ಕೊಂದದ್ದಿದೆ, ಏನೋ ಉಟ್ಟರು ಅಥವಾ ಏನನ್ನೋ ಉಟ್ಟಿಲ್ಲ ಎಂದು ಬಡಿದದ್ದಿದೆ. ಹೀಗೆಲ್ಲ ಮಾಡುತ್ತಿರುವವರಿಗೆ ಸ್ವಲ್ಪವೂ ನಾಚಿಕೆ ಅನಿಸುತ್ತಿಲ್ಲ ಎಂಬುದೇ ಇಲ್ಲಿನ ಅಚ್ಚರಿ. 

ಮರಿಯಂ ಶರಿಯತ್‌ಮದಾರಿ ಎಂಬ ಇರಾನ್‌ನ ಯುವತಿಯನ್ನು ಟರ್ಕಿ ಸರ್ಕಾರ ಕಳೆದ ಸೋಮವಾರ ಬಂಧಿಸಿ, ಬಳಿಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆದ್ದಾಗ ಬಿಡುಗಡೆ ಮಾಡಿದೆ. ಹೀಗೆ ಬಂಧನ ಮತ್ತು ಬಿಡುಗಡೆಗೆ ಒಳಗಾದ ಯುವತಿ ಭಯೋತ್ಪಾದಕಿ ಅಲ್ಲ, ಬದಲಿಗೆ ಸ್ವಾತಂತ್ರ್ಯ ಹೋರಾಟಗಾರ್ತಿ. ಇರಾನ್‌ನಲ್ಲಿ 1979ರ ಕ್ರಾಂತಿಯ ಬಳಿಕ, ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರಬೇಕಾದರೆ ತಲೆ, ಮುಖ ಮುಚ್ಚುವುದು ಕಡ್ಡಾಯ. ಇದನ್ನು ಪಾಲಿಸದಿದ್ದರೆ ಜೈಲು ಶಿಕ್ಷೆ ಖಚಿತ. ಅನೈತಿಕ ವರ್ತನೆ, ಅನೈತಿಕ ವರ್ತನೆಗೆ ಪ್ರಚೋದನೆ ಎಂಬುದು ಇಂಥವರ ಮೇಲೆ ಹೇರುವ ಆರೋಪ. ಈಗ ಅದಕ್ಕೆ ದೇಶದ ವಿರುದ್ಧ ಪಿತೂರಿ ಎಂಬ ಗಂಭೀರ ಆ‍ಪಾದನೆಯನ್ನೂ ಸೇರಿಸಲಾಗುತ್ತಿದೆ. 

ಅದು 2017ರ ಡಿಸೆಂಬರ್‌ 27ರ ಸಂಜೆ. ಟೆ‌ಹರಾನ್‌ನ ಅತ್ಯಂತ ದಟ್ಟಣೆಯ ಇನ್‌ಕಿಲಾಬ್‌ (ಕ್ರಾಂತಿ) ಬೀದಿ. ವಿದ್ಯುತ್‌ ಸರಬರಾಜು ಕಂಪನಿಯ ಎತ್ತರದ ಪೆಟ್ಟಿಗೆ ಏರಿದ ಯುವತಿಯೊಬ್ಬಳು ತನ್ನ ತಲೆವಸ್ತ್ರವನ್ನು ಉದ್ದದ ಬಡಿಗೆಯೊಂದರ ತುದಿಗೆ ಸುತ್ತಿ ಬೀಸತೊಡಗಿದಳು. ಪೊಲೀಸರು ಬಂದು ಕೆಳಗೆ ತಳ್ಳಿ, ಬಂಧಿಸುವವರೆಗೆ ಆಕೆ ಬೀಸುತ್ತಲೇ ಇದ್ದಳು. ಇರಾನ್‌ನ ನ್ಯಾಯ ವ್ಯವಸ್ಥೆ ಆಕೆಗೆ ಶಿಕ್ಷೆಯನ್ನೂ ವಿಧಿಸಿತು. 31ರ ವಯಸ್ಸಿನ ಆ ಯುವತಿಯ ಹೆಸರು ವಿದಾ ಮೊವಾಹೆದಿ. ಈಕೆಯೇ ಕ್ರಾಂತಿ ಬೀದಿ ಯುವತಿಯರ ಮೊದಲ ಸ್ಫೂರ್ತಿ. 2018ರ ಆಕ್ಟೋಬರ್‌ನಲ್ಲಿ ಇದೇ ಬೀದಿಯ ಗುಮ್ಮಟವೊಂದರ ಮೇಲೆ ಏರಿದ ವಿದಾ ತಲೆವಸ್ತ್ರ ಹೇರಿಕೆಯನ್ನು ಮತ್ತೊಮ್ಮೆ ಧಿಕ್ಕರಿಸಿದರು. ಈ ಬಾರಿ, ಕೋಲಿನ ತುದಿಯಲ್ಲಿ ತಲೆವಸ್ತ್ರ ಬಾವುಟದಂತೆ ಹಾರಾಡುತ್ತಿದ್ದರೆ, ಕೈಯಲ್ಲಿ ಬೆಲೂನುಗಳಿದ್ದವು; ಅಪರಾಧ ಪುನರಾವರ್ತನೆಗೂ ಆಕೆ ಶಿಕ್ಷೆ ಅನುಭವಿಸಬೇಕಾಯಿತು. ಹೋರಾಟದ ಕಿಚ್ಚು ಆರದಂತೆ ನೋಡಿಕೊಂಡವರು ಮರಿಯಂ. 

ಆಡಳಿತ ವ್ಯವಸ್ಥೆಯು ಅವುಡುಗಚ್ಚಬೇಕಾದ ಸ್ಥಿತಿ ಅದು. ‘ಕ್ರಾಂತಿ ಬೀದಿಯ ಯುವತಿಯರು’ ಎಂಬುದು ಪ್ರತಿರೋಧದ ಸಂಕೇತವಾಗಿ ಹರಳುಗಟ್ಟಿತು. 2018ರಲ್ಲಿ, ಟೆಹರಾನ್‌ ಮಾತ್ರವಲ್ಲ, ಅಕ್ಕಪಕ್ಕದ ನಗರ ಪಟ್ಟಣಗಳಲ್ಲಿ ಕೂಡ ಹೆಣ್ಣು ಮಕ್ಕಳು ಎತ್ತರದ ಸ್ಥಳಗಳಿಗೆ ಏರಿ, ತಲೆವಸ್ತ್ರವನ್ನು ಬಿಡುಗಡೆಯ ಸಂಕೇತದಂತೆ ಬೀಸತೊಡಗಿದರು. ಈ ಅಪರಾಧಕ್ಕಾಗಿ 2018ರಲ್ಲಿ ಪೊಲೀಸರು ಬಂಧಿಸಿದ ಯುವತಿಯರ ಅಧಿಕೃತ ಸಂಖ್ಯೆ 32. 2018ರ ಇಡೀ ವರ್ಷ ‘#ಗರ್ಲ್ಸ್‌ ಆಫ್‌ ರೆವಲ್ಯೂಷನ್‌ ಸ್ಟ್ರೀಟ್’‌ ಎಂಬ ಹ್ಯಾಷ್‌ಟ್ಯಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇತ್ತು. ಸಹಜವಾಗಿಯೇ ಇರುತ್ತಿದ್ದ ಜನಜಂಗುಳಿಯ ಬೀದಿಯಿಂದ ಆಗೊಮ್ಮೆ ಈಗೊಮ್ಮೆ ಯುವತಿಯೊಬ್ಬಳು ಎತ್ತರದ ಸ್ಥಳವೊಂದರ ಮೇಲೆ ದಿಢೀರ್‌ ಏರಿ, ಪ್ರತಿರೋಧದ ಬಿಸಿ ಆರದಂತೆ ನೋಡಿಕೊಳ್ಳುತ್ತಿದ್ದಳು. 

ಬೀದಿಯೊಂದು ಜನಮಾನಸದ ಪ್ರತಿರೋಧದ ಚಲನಶೀಲ ಪ್ರತಿಮೆಯಾದ ಸೋಜಿಗಕ್ಕೂ ಈ ಚಳವಳಿಯು ಸಾಕ್ಷಿಯಾಯಿತು. 1979ರಲ್ಲಿ ಪಹ್ಲವಿ ವಂಶದ ಆಡಳಿತವನ್ನು ಕೊನೆಗೊಳಿಸಿದ ಕ್ರಾಂತಿಯ ಕೇಂದ್ರ ಬಿಂದು ಈ ಕ್ರಾಂತಿ ಬೀದಿಯೇ ಆಗಿತ್ತು. ಅದಕ್ಕಾಗಿಯೇ ಈ ಬೀದಿಗೆ ಇನ್‌ಕಿಲಾಬ್‌ ಬೀದಿ ಎಂಬ ಹೆಸರು ಬಂದಿತ್ತು. ಈಗ ಅದೇ ಹೆಸರು, ಕ್ರಾಂತಿ ಬೀದಿಯ ಯುವತಿಯರು ಎಂಬ ಪ್ರೇರಣೆಯೇ ಆಗಿಬಿಟ್ಟಿದೆ. 

ಮರಿಯಂ, ಇರಾನ್‌ನಿಂದ ಟರ್ಕಿಗೆ ಪಲಾಯನ ಮಾಡಿದ್ದು 2019ರಲ್ಲಿ. ರಾಜಕೀಯ, ಸಾಮಾಜಿಕ, ಆರ್ಥಿಕ ಕಾರಣಗಳಿಗಾಗಿ ಇರಾನ್‌ ತೊರೆಯುವವರಿಗೆ ಮೊದಲ ಆಶ್ರಯವಾಗಿ ಕಾಣಿಸುವುದೇ ಟರ್ಕಿ. ಸುಮಾರು ಎಂಟು ಕೋಟಿ ಜನಸಂಖ್ಯೆಯ ಟರ್ಕಿಯಲ್ಲಿ ಈಗ ಹೀಗೆ ಬಂದವರೇ 30 ಲಕ್ಷಕ್ಕೂ ಅಧಿಕ. ಆದರೆ, ಹೀಗೆ ಬರುವವರನ್ನು ತೆರೆದ ಬಾಹುಗಳಿಂದ ಟರ್ಕಿ ಸ್ವಾಗತಿಸುತ್ತಿದ್ದ ದಿನಗಳು ಮುಗಿದಿವೆ. ವಲಸಿಗರ ಸ್ವೀಕಾರಕ್ಕೆ ದೇಶದ ಒಳಗೆ ಅಸಮಾಧಾನ ಇದೆ. ಅದಲ್ಲದೆ, ಮಧ್ಯ ಪ್ರಾಚ್ಯದ ಎರಡು ಪ್ರಭಾವಿ ದೇಶಗಳು ಟರ್ಕಿ ಮತ್ತು ಇರಾನ್‌. ಇರಾನ್‌ಗೆ ಸಡ್ಡು ಹೊಡೆದು ನಿಲ್ಲಲು ಟರ್ಕಿಗೆ ಇಷ್ಟವೂ ಇಲ್ಲ. ಹಾಗಾಗಿಯೇ, ಮರಿಯಂಗೆ ಅಧಿಕೃತ ಆಶ್ರಯ ಟರ್ಕಿಯಲ್ಲಿ ಸಿಗಲಿಲ್ಲ. ಆಕೆಯನ್ನು ಮರಳಿ ಇರಾನ್‌ಗೆ ಕಳಿಸುವ ಲೆಕ್ಕಾಚಾರದಲ್ಲಿ ಟರ್ಕಿ ಆಡಳಿತ ಇತ್ತು. 

ಇದು ಸಾಧ್ಯವಾಗದಂತೆ ಆದದ್ದು ಟರ್ಕಿ ರಾಜಧಾನಿ ಅಂಕಾರಾದ ವಕೀಲರ ಒಗ್ಗಟ್ಟಿನ ನಿರ್ಧಾರದಿಂದ. ‘ಮರಿಯಂಳನ್ನು ಇರಾನ್‌ಗೆ ಹಸ್ತಾಂತರಿಸಲು ಸರ್ಕಾರ ಪ್ರಯತ್ನಿಸಬಹುದು. ಆದರೆ, ಆಕೆಗೆ ಇಷ್ಟ ಇಲ್ಲದಿದ್ದರೆ ಟರ್ಕಿಯಿಂದ ಹೊರಗೆ ಹಾಕಲು ವಕೀಲರು ಬಿಡುವುದೇ ಇಲ್ಲ’ ಎಂದವರು ಅಂಕಾರಾದ ವಕೀಲರ ಸಂಘದ ಅಧ್ಯಕ್ಷ ಗೋಕನ್‌ ಬುಜ್‌ಕರ್ಟ್‌. ಮರಿಯಂ ಅವರನ್ನು ನಿರಾಶ್ರಿತೆ ಎಂದು ಪರಿಗಣಿಸುವ ಬಗ್ಗೆ ಯೋಚಿಸಲಾಗುವುದು ಎಂದು ಟರ್ಕಿ ಸರ್ಕಾರ ಹೇಳಿದೆ. 

ಹೋರಾಟದ ಕಿಚ್ಚು ಹಚ್ಚಿದ ವಿದಾ, ಪ್ರತಿರೋಧದ ಸ್ಫೂರ್ತಿ ತುಂಬುತ್ತಲೇ ಇರುವ ಮರಿಯಂ ಅಸಾಮಾನ್ಯರೇನಲ್ಲ. ಆದರೆ, ವ್ಯಕ್ತಿಸ್ವಾತಂತ್ರ್ಯಕ್ಕಾಗಿ ಅವರು ನೀಡುತ್ತಿರುವ ಸ್ಫೂರ್ತಿ ಸಾಮಾನ್ಯವಾದುದೂ ಅಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು