ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌ ಸರಿಯಾಗಿ ಧರಿಸದ ಯುವತಿಯ ಸಾವು ಪ್ರಕರಣ: ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ

ಎಲ್ಲಾ ದೇಶಗಳಲ್ಲೂ ಹೆಚ್ಚಿರುವ ಆಕ್ರೋಶ
Last Updated 21 ಸೆಪ್ಟೆಂಬರ್ 2022, 15:31 IST
ಅಕ್ಷರ ಗಾತ್ರ

ಟೆಹರಾನ್‌/ಪ್ಯಾರಿಸ್‌: ಹಿಜಾಬ್‌ ಅನ್ನು ‘ಸರಿಯಾಗಿ’ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ 22 ವರ್ಷದ ಯುವತಿ ಮಹಸಾ ಅಮೀನಿ ಅವರನ್ನು ಇರಾನಿನ ನೈತಿಕ ಪೊಲೀಸರು ಇದೇ 13ರಂದು ಬಂಧಿಸಿದ್ದರು. ಬಂಧನವಾದ ಮೂರು ದಿನಗಳಲ್ಲಿ ಅಮೀನಿ ಅವರು ಮೃತಪಟ್ಟರು. ಇದರ ವಿರುದ್ಧ ಇರಾನ್‌ನ ಮಹಿಳೆಯರು ದೇಶದಾದ್ಯಂತ ತೀವ್ರ ಪ್ರತಿಭಟನೆ ಆರಂಭಿಸಿದ್ದಾರೆ.

ಒಂದೆಡೆ, ಇರಾನ್‌ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರಲ್ಲಿ ಬುಧವಾರ ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಎಂಟು ಮಂದಿ ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ. ಮತ್ತೊಂದೆಡೆ, ಇರಾನ್‌ ಅಧ್ಯಕ್ಷ ಇಬ್ರಾಹಿಮ್ ರಯಿಸಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಅಮೀನಿ ಅವರ ಸಾವಿನ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಅಮೀನಿ ಸಾವಿನ ಕುರಿತು ವಿಶ್ವಸಂಸ್ಥೆ, ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ದೇಶಗಳು ಕಳವಳ ವ್ಯಕ್ತಪಡಿಸಿವೆ.

ವಿಡಿಯೊ ವೈರಲ್‌: ದೇಶದಲ್ಲಿ ಇಟರ್‌ನೆಟ್‌ಗೆ ನಿರ್ಬಂಧವಿದ್ದರೂ, ‘ಡೆತ್‌ ಟು ದಿ ಡಿಕ್ಟೇಟರ್‌’ (ಸರ್ವಾಧಿಕಾರಿ ಸಾಯಲಿ), ‘ವಿಮೆನ್‌, ಲೈಫ್‌, ಫ್ರೀಡಂ’ (ಮಹಿಳೆ, ಜೀವನ, ಸ್ವಾತಂತ್ರ್ಯ) ಎಂದು ಕೂಗುತ್ತಿದ್ದ ಪ್ರತಿಭಟನಕಾರರ ವಿಡಿಯೊ ವೈರಲ್‌ ಆಗಿದೆ.

ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ತಮ್ಮ ಹಿಜಾಬ್‌ ಅನ್ನು ತೆಗೆದು, ಬೆಂಕಿಗೆ ಹಾಕಿದ ದೃಶ್ಯಗಳು ಹಾಗೂ ಒಬ್ಬ ಮಹಿಳೆ ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿರುವ ದೃಶ್ಯ ಇರುವ ವಿಡಿಯೊ ಕೂಡ ವೈರಲ್ ಆಗಿದೆ.

ಮೃತದೇಹ ನೋಡಲು ಬಿಡದ ಸರ್ಕಾರ: ಅಮೀನಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ; ದೌರ್ಜನ್ಯದಿಂದಾಗಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಮೀನಿ ಅವರ ಕುಟುಂಬ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಆಕೆಗೆ ಹೃದಯ ಸಂಬಂಧಿ ಯಾವುದೇ ರೋಗ ಇರಲಿಲ್ಲ. ಜೊತೆಗೆ, ಆಕೆಯನ್ನು ಹೂಳುವ ಮೊದಲು ಮೃತದೇಹವನ್ನು ಅಂತಿಮವಾಗಿ ನೋಡುವ ಅವಕಾಶವನ್ನೂ ಪೊಲೀಸರು ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ.

ಗುಂಡು ಹಾರಿಸುತ್ತಿರುವ ಪೊಲೀಸರು

ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಆಕ್ರೋಶದ ಕಿಡಿಯು ದೇಶದ 15 ನಗರಗಳಿಗೆ ಹಬ್ಬಿದೆ. ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಬುಧವಾರ ಅಶ್ರುವಾಯು ಶೆಲ್‌ ಸಿಡಿಸಿದರು. ಇರಾನ್‌ನ ಅರೆಸೇನಾ ಪಡೆ ಯೋಧರು ಮಹಿಳೆಯರನ್ನು ಬೈಕ್‌ಗಳಲ್ಲಿ ಅಟ್ಟಿಸಿಕೊಂಡು ಹೋಗಿದ್ದಾರೆ. ಅವರಿಗೆ ಬೆತ್ತಗಳಿಂದ ಹೊಡೆದಿದ್ದಾರೆ.

ಈ ಎಲ್ಲದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು ಭದ್ರತಾ ಪಡೆಗಳ ಮೇಲೆ ಕಲ್ಲು ಎಸೆದಿದ್ದಾರೆ. ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮೇಲೆ ಕಸದ ಬುಟ್ಟಿಗಳನ್ನು ಎಸೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್‌ನ ಮಾನವ ಹಕ್ಕುಗಳ ಹೋರಾಟ ಸಂಸ್ಥೆ ‘ಆರ್ಕಿಕಲ್‌ 19’, ‘ಇರಾನ್‌ ಸರ್ಕಾರವು ಪೊಲೀಸರು ಹಾಗೂ ಭದ್ರತಾ ಪಡೆಗಳನ್ನ ಬಳಸಿಕೊಂಡುಪ್ರತಿಭಟನಕಾರರನ್ನು ಅಮಾನುಷವಾಗಿ ದಮನಿಸಲು ಯತ್ನಿಸಿದೆ. ಮಹಿಳೆಯ ಮೇಲೆ ಗುಂಡು, ಶೆಲ್‌ಗಳನ್ನೂ ಹಾರಿಸಲಾಗಿದೆ’ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT