ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳಿನ ಮೇಲೆ ಕೋವಿಡ್ ಹೇಗೆ ಪರಿಣಾಮ ಬೀರುತ್ತದೆ? ನರವಿಜ್ಞಾನಿಗಳು ಏನಂತಾರೆ?

Last Updated 11 ಆಗಸ್ಟ್ 2021, 7:35 IST
ಅಕ್ಷರ ಗಾತ್ರ

ಮೆಲ್ಬರ್ನ್: ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ದೀರ್ಘಕಾಲೀನ ರೋಗಲಕ್ಷಣಗಳಿಂದ ಬಳಲುವ ‘ದೀರ್ಘ ಕೋವಿಡ್’ ಎಂದು ಕರೆಯಲ್ಪಡುವ ಸಿಂಡ್ರೋಮ್ ಬಗ್ಗೆ ವಿಜ್ಞಾನಿಗಳು ಹೆಚ್ಚು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕೋವಿಡ್ ಸೋಂಕಿನ ನಂತರ ಕನಿಷ್ಠ ಮೂರರಿಂದ ನಾಲ್ಕು ತಿಂಗಳ ಕಾಲ ಶೇಕಡಾ 5-24% ರಷ್ಟು ಕೋವಿಡ್ ಪ್ರಕರಣಗಳಲ್ಲಿ ರೋಗಲಕ್ಷಣಗಳು ಉಳಿಯುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ದೀರ್ಘ ಕೋವಿಡ್‌ನ ಅಪಾಯವು ವಯಸ್ಸು ಅಥವಾ ಕೋವಿಡ್ ಕಾಯಿಲೆಯ ಆರಂಭಿಕ ತೀವ್ರತೆಯೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ ಎಂದು ಭಾವಿಸಲಾಗಿದೆ. ಆದ್ದರಿಂದ ಚಿಕ್ಕ ವಯಸ್ಸಿನವರು ಮತ್ತು ಆರಂಭದಲ್ಲಿ ಸೌಮ್ಯವಾದ ಕೋವಿಡ್ ಹೊಂದಿರುವ ಜನರು ಸಹ ದೀರ್ಘ ಕೋವಿಡ್ ಸಮಸ್ಯೆಗೆ ತುತ್ತಾಗಬಹುದು.

ತೀವ್ರ ಆಯಾಸ ಮತ್ತು ನಿರಂತರ ಉಸಿರಾಟದ ತೊಂದರೆ ದೀರ್ಘ ಕೋವಿಡ್‌ನ ಪ್ರಮುಖ ಲಕ್ಷಣಗಳಾಗಿವೆ.

ಹಾಗಾದರೆ, ಮಿದುಳಿನ ಮೇಲೆ ಕೋವಿಡ್ ಪರಿಣಾಮ ಏನು? ನರವಿಜ್ಞಾನಿಗಳು ಏನಂತಾರೆ? ಎಂಬುದರ ಮಾಹಿತಿ ಇಲ್ಲಿದೆ.

ವೈರಸ್ ನಮ್ಮ ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಆಸ್ಟ್ರೇಲಿಯಾದ ಫ್ಲೋರೆ ನರ ವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ ನರ ವಿಜ್ಞಾನಿಗಳಾದ ಟ್ರೆವರ್ ಕಿಲ್ಪಾಟ್ರಿಕ್ ಮತ್ತು ಸ್ಟೀವನ್ ಪೆಟ್ರೋ ಈ ಕುರಿತಂತೆ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್‌ಫ್ಲೂಯೆಂಜಾ ಸೇರಿದಂತೆ ಉಸಿರಾಟಕ್ಕೆ ತೊಡಕು ಮಾಡುವ ವೈರಸ್‌ಗಳು ಮತ್ತು ಮಿದುಳಿನ ಅಸಮರ್ಪಕ ಕಾರ್ಯನಿರ್ವಹಣೆಗೆ ಸಂಬಂಧವಿದೆ ಎಂಬುದಕ್ಕೆ ಪುರಾವೆಗಳಿವೆ. 1918 ರ ಸ್ಪ್ಯಾನಿಷ್ ಜ್ವರದ ಸಾಂಕ್ರಾಮಿಕದ ದಾಖಲೆಗಳಲ್ಲಿ, ಬುದ್ಧಿಮಾಂದ್ಯತೆ, ಅರಿವಿನ ಕುಸಿತ, ಚಲನೆ ಮತ್ತು ನಿದ್ರೆಯ ತೊಂದರೆಗಳು ಇದ್ದದ್ದನ್ನು ಉಲ್ಲೇಖಿಸಲಾಗಿದೆ.

2002 ರಲ್ಲಿ ಸಾರ್ಸ್ ಮತ್ತು 2012 ರಲ್ಲಿ ಮರ್ಸ್ ವೈರಾಣುಗಳಿಂದ ಚೇತರಿಸಿಕೊಂಡ ಶೇಕಡಾ 15-20 ರಷ್ಟು ಜನರು ಖಿನ್ನತೆ, ಆತಂಕ, ನೆನಪಿನ ತೊಂದರೆ ಮತ್ತು ಆಯಾಸದಂತಹ ತೊಂದರೆಗಳನ್ನು ಅನುಭವಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ.

ಕೋವಿಡ್‌ಗೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್ ತಡೆಗೋಡೆ ದಾಟಿ ಮಿದುಳನ್ನು ಪ್ರವೇಶಿಸುತ್ತದೆಯೇ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ, ಆದರೆ, ನಮ್ಮ ಮೂಗನ್ನು ಮಿದುಳಿಗೆ ಸಂಪರ್ಕಿಸುವ ನರಗಳ ಮೂಲಕ ವೈರಸ್ ಮಿದುಳಿಗೆ ‘ಹಿಚ್‌ಹೈಕ್’ ಆಗಬಹುದು ಎಂದು ಸೂಚಿಸುವ ಡೇಟಾ ಲಭ್ಯವಿದೆ.

ಅನೇಕ ಸೋಂಕಿತ ವಯಸ್ಕರಲ್ಲಿ, ವೈರಸ್‌ನ ಆನುವಂಶಿಕ ಅಂಶಗಳು ಮೂಗಿನ ಭಾಗದಲ್ಲಿ ಕಂಡುಬಂದಿವೆ. ಇದರ ಪರಿಣಾಮ, ಕೋವಿಡ್ ಹೊಂದಿರುವ ಜನರು ವಾಸನೆಯ ನಷ್ಟದಂತಹ ರೋಗಲಕ್ಷಣ ಕಂಡುಬಂದಿದೆ.. ಹೀಗಾಗಿ, ವೈರಸ್ ಮೂಗಿನ ಮೂಲಕ ಮಿದುಳಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಿದುಳಿಗೆ ಕೋವಿಡ್ ಹೇಗೆ ಹಾನಿ ಮಾಡುತ್ತದೆ?

ಮೂಗಿನ ಸಂವೇದನಾ ಕೋಶಗಳು ಭಾವನೆ, ಕಲಿಕೆ ಮತ್ತು ಸ್ಮರಣೆಯನ್ನು ನಿಯಂತ್ರಿಸುವ ಮಿದುಳಿನ ‘ಲಿಂಬಿಕ್ ಸಿಸ್ಟಮ್’ ಎಂದು ಕರೆಯಲ್ಪಡುವ ಪ್ರದೇಶಕ್ಕೆ ಸಂಪರ್ಕ ಹೊಂದಿರುತ್ತವೆ.

ಜೂನ್‌ನಲ್ಲಿ ಬಿಡುಗಡೆಯಾದ ಬ್ರಿಟನ್ನಿನ ಅಧ್ಯಯನದಲ್ಲಿ, ಜನರು ಕೋವಿಡ್‌ಗೆ ಒಳಗಾಗುವ ಮೊದಲು ಮತ್ತು ಕೋವಿಡ್ ಸೋಂಕಿಗೆ ಒಳಗಾದ ನಂತರದ ಮಿದುಳಿನ ಚಿತ್ರಗಳನ್ನು ಹೋಲಿಸಿ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಸೋಂಕಿಲ್ಲದ ಜನರಿಗೆ ಹೋಲಿಸಿದರೆ ಸೋಂಕಿತರ ಮಿದುಳಿನ ಲಿಂಬಿಕ್ ವ್ಯವಸ್ಥೆಯ ಭಾಗಗಳು ಗಾತ್ರದಲ್ಲಿ ಕಡಿಮೆಯಾಗಿವೆ ಎಂದು ಅದರಲ್ಲಿ ಕಂಡುಬಂದಿದೆ. ಇದು ಭವಿಷ್ಯದಲ್ಲಿ ಮೆದುಳಿನ ಕಾಯಿಲೆಗಳಿಗೆ ಒಳಗಾಗುವ ದುರ್ಬಲತೆಯ ಸೂಚನೆ ಮತ್ತು ದೀರ್ಘಕೋವಿಡ್ ರೋಗಲಕ್ಷಣಗಳ ಹೊರಹೊಮ್ಮುವಿಕೆಯಲ್ಲಿ ಪಾತ್ರವಹಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಕೋವಿಡ್ ಪರೋಕ್ಷವಾಗಿ ಮೆದುಳಿನ ಮೇಲೆ ಪರಿಣಾಮ ಬೀರಬಹುದು. ವೈರಸ್ ರಕ್ತನಾಳಗಳನ್ನು ಹಾನಿಗೊಳಿಸಬಹುದು. ರಕ್ತಸ್ರಾವ ಅಥವಾ ಬ್ಲಾಕಿಂಗ್ ಸಮಸ್ಯೆ ಉಂಟು ಮಾಡಬಹುದು.

ವೈರಸ್ ಕೆಲವರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಕೆಲವರಲ್ಲಿ, ಇದು ಮಿದುಳಿನ ಕಾರ್ಯವನ್ನು ಕಡಿಮೆ ಮಾಡುವ ವಿಷಕಾರಿ ಅಣುಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ.

ಇದಲ್ಲದೆ, ಕರುಳಿನ ಕಾರ್ಯವನ್ನು ನಿಯಂತ್ರಿಸುವ ನರಗಳ ಮೇಲೂ ಕೋವಿಡ್‌ನ ಪರಿಣಾಮಗಳನ್ನು ಸಹ ಪರಿಗಣಿಸಬೇಕು. ಇದು ಜೀರ್ಣಕ್ರಿಯೆ ಮತ್ತು ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯ ಮತ್ತು ಸಂಯೋಜನೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ, ಮೆದುಳಿನ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ.

ಪಿಟ್ಯುಟರಿ ಗ್ರಂಥಿಯ ಕಾರ್ಯದ ಮೇಲೂ ಕೊರೊನಾ ವೈರಸ್ ಪರಿಣಾಮ ಬೀರಬಹುದು. ಹಾರ್ಮೋನ್ ಉತ್ಪಾದನೆಯನ್ನು ನಿಯಂತ್ರಿಸುವ ಪಿಟ್ಯುಟರಿ ಗ್ರಂಥಿಯನ್ನು ಸಾಮಾನ್ಯವಾಗಿ ‘ಮಾಸ್ಟರ್ ಗ್ರಂಥಿ’ಎಂದು ಕರೆಯಲಾಗುತ್ತದೆ. ಇದು ಕಾರ್ಟಿಸೋಲ್ ಅನ್ನು ಒಳಗೊಂಡಿದೆ. ಕಾರ್ಟಿಸೋಲ್ ವ್ಯಕ್ತಿಯ ಒತ್ತಡವನ್ನು ನಿಯಂತ್ರಿಸುತ್ತದೆ. ಕಾರ್ಟಿಸೋಲ್ ಕೊರತೆಯಿದ್ದಾಗ, ಇದು ದೀರ್ಘಕಾಲದ ಆಯಾಸಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.

ದೀರ್ಘ ಕೋವಿಡ್ ಬಗ್ಗೆ ಹಲವು ಉತ್ತರಿಸಲಾಗದ ಪ್ರಮುಖ ಪ್ರಶ್ನೆಗಳಿವೆ. ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಪರಿಣಾಮ ಹೇಗೆ ಮುಂದುವರಿಯುತ್ತದೆ. ಅಪಾಯಕಾರಿ ಅಂಶಗಳು ಮತ್ತು ಫಲಿತಾಂಶಗಳ ವ್ಯಾಪ್ತಿ ಹಾಗೂ ಅದಕ್ಕೆ ನೀಡುವ ಅತ್ಯುತ್ತಮ ಚಿಕಿತ್ಸಾ ವಿಧಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಸ್ತಾರವಾದ ಅಧ್ಯಯನ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT