ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸ ನಿರ್ಣಯ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪದಚ್ಯುತಿ

Last Updated 10 ಏಪ್ರಿಲ್ 2022, 8:20 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯದ ನಿರ್ಣಾಯಕ ಸಂಸತ್‌ ಅಧಿವೇಶನದಲ್ಲಿ ಪರಾಭವಗೊಂಡಿದ್ದಾರೆ.

ಪಾಕಿಸ್ತಾನದ ಸಂಸತ್ತು 'ನ್ಯಾಷನಲ್‌ ಅಸೆಂಬ್ಲಿ'ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿಯೊಬ್ಬರು ಅಧಿಕಾರದಿಂದ ಪದಚ್ಯುತಿಗೊಂಡಿದ್ದಾರೆ. ಇದುವರೆಗೆ ಯಾವೊಬ್ಬ ಪ್ರಧಾನಿಯೂ 5 ವರ್ಷಗಳ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹ.

ಶನಿವಾರ ಮಧ್ಯರಾತ್ರಿ ವರೆಗೆ ನಡೆದ ಹೈಡ್ರಾಮದಿಂದ ಕೂಡಿದ್ದ ಸಂಸತ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಒಕ್ಕೂಟಕ್ಕೆ 174 ಮತಗಳು ಸಿಕ್ಕಿವೆ. 342 ಸದಸ್ಯ ಬಲದ ಸಂಸತ್‌ ಅಧಿವೇಶನದಲ್ಲಿ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿ ಪಟ್ಟದಿಂದ ಹೊರಗೆ ಹಾಕಲು ಕನಿಷ್ಠ 172 ಮತಗಳ ಅಗತ್ಯವಿತ್ತು.

ಸಂಸತ್‌ ಅಧಿವೇಶನ ಶನಿವಾರ ಪುನರಾರಂಭಗೊಂಡ ಕೆಲ ನಿಮಿಷಗಳಲ್ಲೇ ಸ್ಪೀಕರ್‌ ಅಸಾದ್‌ ಖೈಸರ್‌ ಹಾಗೂ ಡೆಪ್ಯೂಟಿ ಸ್ಪೀಕರ್‌ ಖಾಸಿಂ ಸೂರಿ ರಾಜೀನಾಮೆ ನೀಡಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಸಂಸತ್ತಿನಲ್ಲಿ ಶನಿವಾರ ಇಡೀ ದಿನ ವಾಗ್ವಾದ ನಡೆಯಿತು. ಸ್ಪೀಕರ್ ಖೈಸರ್‌ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಅಧಿವೇಶನವು ಒಂದಿಲ್ಲೊಂದು ಕಾರಣಕ್ಕಾಗಿ ಮೂರು ಬಾರಿ ಮುಂದೂಡಲ್ಪಟ್ಟಿತು.

ರಾಜೀನಾಮೆಯನ್ನು ಘೋಷಿಸಿದ ನಂತರ, ಪಿಎಂಎಲ್-ಎನ್‌ ಪಕ್ಷದ ಅಯಾಜ್ ಸಾದಿಕ್ ಅವರ ಅಧ್ಯಕ್ಷತೆಯಲ್ಲಿ ಕಲಾಪ ನಡೆದಿದ್ದು, ಪ್ರಧಾನಿ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆ ತಡರಾತ್ರಿ ಆರಂಭವಾಯಿತು. ನಾಟಕೀಯ ಬೆಳವಣಿಗೆಯೊಂದರಲ್ಲಿ ಇಮ್ರಾನ್‌ ಖಾನ್‌ ಅವರ ಕಾರ್ಯದರ್ಶಿಯನ್ನು ದಿಢೀರ್‌ ವರ್ಗಾವಣೆಮಾಡಿ ಅಧಿಸೂಚನೆ ಹೊರಡಿಸಲಾಯಿತು.

ಇನ್ನೊಂದೆಡೆ ಆಡಳಿತಾರೂಢ ಪಕ್ಷವಾದ ಪಿಟಿಐ ಬೆಂಬಲಿಗರು ಸಂಸತ್ ಹೊರಗಡೆ ಭಾರಿ ಪ್ರತಿಭಟನೆ ನಡೆಸಿದರು. ಸುಪ್ರೀಂ ಕೋರ್ಟ್‌ ತೀರ್ಪಿನಂತೆ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಶಹಬಾಝ್‌ ಶರೀಪ್‌ಪ್ರಧಾನಿಯಾಗಿ ಆಯ್ಕೆ?

ಸಂಸತ್‌ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಅಂದು ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. 'ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌' ಪಕ್ಷದ ಅಧ್ಯಕ್ಷ ಶಹಬಾಝ್‌ ಶರೀಪ್‌ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT