ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ‘ಮಲೇರಿಯಾ ನಿರ್ಮೂಲನೆ’ಗೆ ಡಾ. ರಾಜ್ ಪಂಜಾಬಿ ನೇಮಕ

Last Updated 2 ಫೆಬ್ರುವರಿ 2021, 6:37 IST
ಅಕ್ಷರ ಗಾತ್ರ

ವಾಷಿಂಗ್ಟನ್: ಆಫ್ರಿಕಾ ಮತ್ತು ಏಷ್ಯಾ ರಾಷ್ಟ್ರಗಳಲ್ಲಿ ಮಲೇರಿಯಾ ರೋಗವನ್ನು ನಿರ್ಮೂಲನೆ ಮಾಡಲು ರೂಪಿಸಿರುವ ‘ದಿ ಪ್ರೆಸಿಡೆಂಟ್ ಮಲೇರಿಯಾ ಇನಿಶಿಯೇಟಿವ್‌‘ (ಪಿಎಂಐ) ಕಾರ್ಯಕ್ರಮದ ಜಾಗತಿಕ ಸಂಯೋಜಕರಾಗಿ ಭಾರತ ಮೂಲದ ವೈದ್ಯ ಡಾ. ರಾಜ್‌ ಪಂಜಾಬಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ.

ಜಾಗತಿಕ ಸಂಯೋಜಕರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರಾಜ್ ಪಂಜಾಬಿ, ‘ಮಲೇರಿಯಾ ನಿರ್ಮೂಲನೆಗಾಗಿ ರಚಿಸಿರುವ ತಜ್ಞರ ತಂಡವನ್ನು ಮುನ್ನಡೆಸಲು ಅಮೆರಿಕ ಅಧ್ಯಕ್ಷರು ನನ್ನನ್ನು ನೇಮಿಸಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳಲು ತುಂಬಾ ಸಂಭ್ರಮವೆನಿಸುತ್ತಿದೆ. ಇದು ನನಗೆ ದೊರೆತಿರುವ ಬಹುದೊಡ್ಡ ಗೌರವವಾಗಿದೆ. ಈ ಅವಕಾಶ ನೀಡಿದ ಅಧ್ಯಕ್ಷರಿಗೆ ಕೃತಜ್ಞನಾಗಿದ್ದೇನೆ‘ ಎಂದು ಹೇಳಿದರು.

ಲೈಬೀರಿಯಾದಲ್ಲಿ ಜನಿಸಿದ ರಾಜ್ ಪಂಜಾಬಿ, ಅಲ್ಲಿ ನಡೆದ 1990ರ ಯುದ್ಧದ ವೇಳೆಯಲ್ಲಿ ತಮ್ಮ ಕುಟುಂಬದೊಂದಿಗೆ ದೇಶ ಬಿಟ್ಟು ಅಮೆರಿಕಕ್ಕೆ ವಲಸೆ ಬಂದಿದ್ದರು.

‘ಮೂವತ್ತು ವರ್ಷಗಳ ಹಿಂದೆ ಅಮೆರಿಕಕ್ಕೆ ನಾನು, ನನ್ನ ಕುಟುಂಬದೊಂದಿಗೆ ವಲಸೆ ಬಂದೆ. ಇಲ್ಲಿ ನಾವು ಪುನಃ ಬದುಕು ಕಟ್ಟಿಕೊಳ್ಳಲು ಅಮೆರಿಕನ್ನರು ನೆರವಾದರು. ಜೀವನ ರೂಪಿಸಲು ನೆರವಾದ ಈ ದೇಶಕ್ಕೆ ಸೇವೆ ಸಲ್ಲಿಸಲು ಬೈಡನ್ – ಹ್ಯಾರಿಸ್ ಆಡಳಿತ ಅವಕಾಶ ನೀಡಿದೆ. ಇದು ನನಗೆ ಸಿಕ್ಕ ಗೌರವವಾಗಿದೆ‘ ಎಂದು ಹೇಳಿದರು.

‘ನನ್ನ ಹಿಂದಿನ ತಲೆಮಾರಿನವರು (ಅಜ್ಜ ಅಜ್ಜಿಯರು ಮತ್ತು ಪೋಷಕರು) ಭಾರತದಲ್ಲಿ ನೆಲೆಸಿದ್ದರು. ಅವರಲ್ಲಿ ಕೆಲವರು ಮಲೇರಿಯಾ ರೋಗದಿಂದ ಸಾವನ್ನಪ್ಪಿದ್ದರು. ನಾನೂ ಸಣ್ಣ ವಯಸ್ಸಿನಲ್ಲಿ ಲೈಬೀರಿಯಾದಲ್ಲಿದ್ದಾಗ ಮಲೇರಿಯಾ ರೋಗಕ್ಕೆ ತುತ್ತಾಗಿದ್ದೆ. ನಂತರ ಆಫ್ರಿಕಾದಲ್ಲಿ ವೈದ್ಯನಾಗಿ ಮಲೇರಿಯಾ ರೋಗಿಗಳಿಗೆ ಸೇವೆ ಮಾಡಿದ್ದೇನೆ. ಈ ರೋಗ ಹಲವು ಜೀವಗಳನ್ನು ಬಲಿತೆಗೆದುಕೊಂಡಿದ್ದನ್ನು ಗಮನಿಸಿದ್ದೇನೆ‘ ಎಂದು ರಾಜ್ ಪಂಜಾಬಿ ಹೇಳಿದರು.

2005ರಲ್ಲಿ ರಲ್ಲಿ ಪ್ರಾರಂಭವಾದ ದಿ ಪ್ರೆಸಿಡೆಂಟ್ ಮಲೇರಿಯಾ ಇನಿಶಿಯೇಟಿವ್ (ಪಿಎಂಐ – ಅಧ್ಯಕ್ಷರ ಮಲೇರಿಯಾ ನಿರ್ಮೂಲನಾ ಯೋಜನೆ ), ಮಲೇರಿಯಾದ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಆಫ್ರಿಕಾದ 24 ಪಾಲುದಾರ ರಾಷ್ಟ್ರಗಳ ಜತೆಗೆ, ಆಗ್ನೇಯ ಏಷ್ಯಾದ ಗ್ರೇಟರ್ ಮೆಕಾಂಗ್ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT