ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಜರ್‌ ಪ್ರಶಸ್ತಿ

ಮುಸ್ಲಿಮರನ್ನು ಸೆರೆಯಲ್ಲಿಟ್ಟಿರುವ ಚೀನಾ ಕ್ರಮ ಕುರಿತು ವರದಿ
Last Updated 12 ಜೂನ್ 2021, 19:56 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮುಸ್ಲಿಮರನ್ನು ಸೆರೆಯಲ್ಲಿಡಲು ಷಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಬೃಹತ್‌ ಜೈಲುಗಳನ್ನು ನಿರ್ಮಿಸಿರುವ ಕುರಿತು ತನಿಖಾ ವರದಿ ಪ್ರಕಟಿಸುವ ಮೂಲಕ ಚೀನಾದ ಕ್ರಮವನ್ನು ಜಗತ್ತಿಗೆ ತಿಳಿಸಿದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ಈ ಬಾರಿಯ ಪ್ರತಿಷ್ಠಿತ ‘ಪುಲಿಟ್ಜರ್‌ ಪ್ರಶಸ್ತಿ‘ಗೆ ಭಾಜನರಾಗಿದ್ದಾರೆ.

ವಿನೂತನ ತನಿಖಾ ವರದಿಗಳ ಮೂಲಕ ಮೌಲ್ಯಯುತ ಸುದ್ದಿಗಳನ್ನು ಪ್ರಸ್ತುಪಡಿಸಿದ ಕಾರಣಕ್ಕಾಗಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಪತ್ರಿಕೋದ್ಯಮ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೇಘಾ ರಾಜಗೋಪಾಲನ್‌ ಅವರು ‘ಬಝ್‌ಫೀಡ್‌ ನ್ಯೂಸ್‌‘ ಎಂಬ ಸುದ್ದಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಟಂಪಾ ಬೇ ಟೈಮ್ಸ್‌’ನ ‌ವರದಿಗಾರರಾದ ನೀಲ್ ಬೇಡಿ ಹಾಗೂ ಕ್ಯಾಥ್ಲಿನ್ ಮ್ಯಾಕ್‌ಗ್ರೊರಿ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಷಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ರಹಸ್ಯವಾಗಿ ಜೈಲುಗಳನ್ನು ನಿರ್ಮಿಸಿ ಮತ್ತು ಸಾಮೂಹಿಕ ತಡೆ ಶಿಬಿರಗಳನ್ನು ಮಾಡಿ, ಅದರಲ್ಲಿ ಮಕ್ಕಳು ಸೇರಿದಂತೆ, ಲಕ್ಷಾಂತರ ಮುಸ್ಲಿಮರನ್ನು ಬಂಧಿಸಿಟ್ಟಿದ್ದ ವಿಚಾರವನ್ನು ಮೇಘಾ ರಾಜಗೋಪಾಲ್ ಅವರು ತಮ್ಮ ವಿಶಿಷ್ಟ ರೀತಿಯ ತನಿಖಾ ವರದಿಗಳ ಮೂಲಕ ಬಹಿರಂಗಪಡಿಸಿದ್ದರು. ಮೇಘಾ ಅವರು ಷಿನ್‌ಜಿಯಾಂಗ್‌ ಪ್ರಾಂತ್ಯದ ಸುದ್ದಿಗಳ ಸರಣಿಗಾಗಿ ‘ಅಂತರರಾಷ್ಟ್ರೀಯ ವರದಿ‘ ವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸ್ಥಳೀಯ ವರದಿಗಾಗಿ ‘ಟಂಪಾ ಬೇ ಟೈಮ್ಸ್‌’ನ ತನಿಖಾ ವರದಿಗಾರ ನೀಲ್ ಬೇಡಿ ಪುಲಿಟ್ಜರ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪೊಲೀಸ್‌ ಇಲಾಖೆಯು ಕಂಪ್ಯೂಟರ್‌ ಮಾದರಿಯನ್ನು ಬಳಸಿ, ಭವಿಷ್ಯದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಶಂಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಈ ಕಾರ್ಯಕ್ರಮದಡಿ ಸಾವಿರಕ್ಕೂ ಅಧಿಕ ಜನರ ಮೇಲೆ ಇಲಾಖೆಯು ಕಣ್ಗಾವಲು ಇರಿಸಿತ್ತು. ಈ ಕಾರ್ಯಕ್ರಮ ಕುರಿತು ನೀಲ್‌ ಬೇಡಿ ಹಾಗೂ ಮ್ಯಾಕ್ ಗ್ರೋರಿ ಅವರು ಸರಣಿ ವರದಿಗಳನ್ನು ಪ್ರಕಟಿಸಿದ್ದರು.

ಫ್ಲಾಯ್ಡ್‌ ಹತ್ಯೆ ಚಿತ್ರೀಕರಿಸಿದ್ದ ಯುವತಿಗೆ ‘‍ಪುಲಿಟ್ಜರ್’ನಿಂದ ಪ್ರಶಂಸಾಪತ್ರ

‘ಮಿನ್ನೆಪೊಲಿಸ್‌ನ ಪೊಲೀಸ್ ಅಧಿಕಾರಿಯೊಬ್ಬರು ಕಪ್ಪುವರ್ಣೀಯ ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಹೊಸಕುವುದನ್ನು ತನ್ನ ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಮಾಡಿದ್ದ ಯುವತಿ ಡಾರ್ನೆಲ್ಲಾ ಫ್ರೇಜಿಯರ್ ಅವರಿಗೆ ‘ಪುಲಿಟ್ಜರ್‌ ಪ್ರಶಸ್ತಿ’ ನೀಡುವ ಸಂಸ್ಥೆಯು ಪ್ರಶಂಸಾಪತ್ರ ನೀಡಿ ಗೌರವಿಸಿದೆ.

ಫ್ರೇಜಿಯರ್ ಮಾಡಿದ ಈ ವಿಡಿಯೊದಿಂದ ಜನಾಂಗೀಯ ತಾರತಮ್ಯದ ವಿರುದ್ಧ ಜಾಗತಿಕ ಹೋರಾಟಕ್ಕೆ ಪ್ರೇರೇಪಣೆ ಸಿಕ್ಕಿತು ಎಂದು ಈ ಪ್ರಶಂಸಾಪತ್ರ ನೀಡಿರುವ ಪುಲಿಟ್ಜರ್‌ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT