ಭಾನುವಾರ, ಏಪ್ರಿಲ್ 2, 2023
33 °C

ರಿಷಿ ಸುನಕ್ ಬಗ್ಗೆ ಭಾರತ ಮೂಲದ ಬ್ರಿಟನ್ ಸಂಸದೆ ನಾದಿಯಾ ಮಾಡಿದ್ದ ಟ್ವೀಟ್ ಡಿಲಿಟ್!

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಭಾರತ ಮೂಲದ, ಬ್ರಿಟನ್‌ ಸಂಸದೆ ನಾದಿಯಾ ವಿಟ್ಟೋಮ್ ಅವರು ಈ ವಾರದ ಆರಂಭದಲ್ಲಿ ರಿಷಿ ಸುನಕ್ ಅವರಿಗೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್‌ ಅನ್ನು ಡಿಲಿಟ್‌ ಮಾಡಲಾಗಿದೆ.

ರಿಷಿ ಪ್ರಧಾನಿಯಾಗುವುದು ‘ಏಷ್ಯನ್ ಪ್ರಾತಿನಿಧ್ಯಕ್ಕೆ ಸಿಕ್ಕ ಗೆಲುವಲ್ಲ’ಎಂದು ಲೇಬರ್‌ ಪಕ್ಷದ ನಾಯಕಿ ನಾದಿಯಾ ಅವರು ಟ್ವೀಟ್‌ ಮಾಡಿದ್ದರು.

ಆ ಟ್ವೀಟ್‌ ಅನ್ನು ಡಿಲಿಟ್‌ ಮಾಡಲು ನಾದಿಯಾ ಅವರಿಗೆ ಸೂಚನೆ ನೀಡಲಾಗಿದೆ ಎಂದು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ಅವರ ವಕ್ತಾರ ತಿಳಿಸಿದ್ದಾರೆ.

ರಿಷಿ ಅವರಿಗೆ ಸಂಬಂಧಿಸಿದ ನಾದಿಯಾ ವಿಟ್ಟೋಮ್‌ ಅವರ ಟ್ವೀಟ್‌ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು ಎಂದು ‘ಬಿಬಿಸಿ’ ವರದಿ ಮಾಡಿದೆ.

ವಿವಾದದ ಬಗ್ಗೆ ನಾದಿಯಾ ವಿಟ್ಟೋಮ್‌ ಅವರ ಕಚೇರಿಯು ಬಿಬಿಸಿಗೆ ಹೇಳಿಕೆ ಬಿಡುಗಡೆ ಮಾಡಿದೆ. ‘ರಿಷಿ ಸುನಕ್ ಅವರಂತೆ, ವಿಟ್ಟೋಮ್ ಕೂಡ ಎರಡನೇ ತಲೆಮಾರಿನ ಭಾರತೀಯ ಬ್ರಿಟಿಷ್‌ ಆಗಿದ್ದಾರೆ. ಬ್ರಿಟಿಷ್ ಏಷ್ಯನ್ ಸಮುದಾಯಗಳ ಪರಿಣಾಮಕಾರಿ ರಾಜಕೀಯ ಪ್ರಾತಿನಿಧ್ಯ ಮತ್ತು ಎಲ್ಲಾ ದುಡಿಯುವ ವರ್ಗದ ಜನರ ಹಿತಾಸಕ್ತಿಯು ಪ್ರಧಾನ ಮಂತ್ರಿಯ ಜನಾಂಗೀಯತೆಗಿಂತ ಹೆಚ್ಚು ಎಂಬುದನ್ನು ನಿರೂಪಿಸುವ ವೇಳೆ, ಹಣಕಾಸು ಸಚಿವರಾಗಿ ರಿಷಿ ಸುನಕ್ ಅವರ ಸಾಧನೆಗಳನ್ನು ನಾದಿಯ ವಿಟ್ಟೋಮ್‌ ಉಲ್ಲೇಖಿಸಿದ್ದಾರೆ’ ಎಂದು ತಿಳಿಸಲಾಗಿದೆ.

ವಿಟ್ಟೋಮ್ ಅವರ ತಂದೆ ಪಂಜಾಬ್‌ ಮೂಲದವರಾಗಿದ್ದು, 21 ನೇ ವಯಸ್ಸಿನಲ್ಲೇ ಪಂಜಾಬ್‌ನ ಬಂಗಾದಿಂದ ಬ್ರಿಟನ್‌ಗೆ ವಲಸೆ ಹೋಗಿದ್ದರು. ವಿಟ್ಟೋಮ್‌ ತಾಯಿ ಆಂಗ್ಲೋ-ಇಂಡಿಯನ್ ಕ್ಯಾಥೋಲಿಕ್ ಸಾಲಿಸಿಟರ್ ಆಗಿದ್ದು, ಲೇಬರ್ ಪಾರ್ಟಿಯ ಮಾಜಿ ಸದಸ್ಯೆಯೂ ಕೂಡ.

ರಿಷಿ ವಿರುದ್ಧ ವಿಟ್ಟೋಮ್‌ ಮಾಡಿದ್ದ ಇತರ ಟ್ವೀಟ್‌ಗಳು

‘1956ರಿಂದೀಚೆಗೆ ಉಂಟಾದ ಜೀವನಮಟ್ಟದಲ್ಲಿನ ಅತಿದೊಡ್ಡ ಕುಸಿತದ ಪರಾಮರ್ಶೆ ಮಾಡುವ ವೇಳೆ, ಹಣಕಾಸು ಸಚಿವರಾಗಿದ್ದ ರಿಷಿ ಸುನಕ್‌ ಅವರು ಬ್ಯಾಂಕ್ ಲಾಭದ ಮೇಲಿನ ತೆರಿಗೆಗಳನ್ನು ಕಡಿತಗೊಳಿಸಿದ್ದರು. ಅವರು ಬಹು ಕೋಟಿ ಒಡೆಯ. ಕಪ್ಪು, ಬಿಳಿ ಅಥವಾ ಏಷ್ಯನ್ ಯಾರೇ ಆಗಿರಿ... ಜೀವನಕ್ಕಾಗಿ ನೀವು ದುಡಿಯುತ್ತಿದ್ದರೆ ಅವರು ನಿಮ್ಮ ಪರವಾಗಿಲ್ಲ’ ಎಂದು ನಾದಿಯ ಟ್ವೀಟ್‌ ಮಾಡಿದ್ದರು.

‘ಬ್ರಿಟನ್‌ ಮೊದಲ ಏಷ್ಯನ್ ಪ್ರಧಾನ ಮಂತ್ರಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್‌ಗಳು ಎಂದು ಅಂದಾಜಿಸಲಾಗಿದೆ. ಇದು ರಾಜ ಮೂರನೇ ಚಾರ್ಲ್ಸ್ ಅವರ ಆಸ್ತಿಗಿಂತಲೂ ದುಪ್ಪಟ್ಟು’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದರು.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು