ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್–ರಷ್ಯಾ ಸಂಘರ್ಷ: ನೆಲಮಾಳಿಗೆಯನ್ನು ಆಶ್ರಯಿಸಿದ ಭಾರತದ 400 ವಿದ್ಯಾರ್ಥಿಗಳು

'ಪ್ರೀತಿಪಾತ್ರರನ್ನು ನೋಡಬೇಕೆನಿಸುತ್ತಿದೆ, ತವರಿಗೆ ಮರಳಲು ನೆರವಾಗಿ' ಎಂದು ಅಳಲು
Last Updated 25 ಫೆಬ್ರುವರಿ 2022, 6:18 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಷ್ಯಾ ಗಡಿಗೆ ಸಮೀಪದಲ್ಲಿರುವ ಉಕ್ರೇನ್‌ನ ಸುಮಿ ನಗರದಲ್ಲಿನ ನೆಲಮಾಳಿಗೆಯೊಂದರಲ್ಲಿ ಭಾರತದ 400 ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಅವರೆಲ್ಲ ಭಾರತಕ್ಕೆ ಹಿಂತಿರುಗಲು ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ (ಫೆ.24) ಬೆಳಿಗ್ಗೆ ಉಕ್ರೇನ್‌ನಲ್ಲಿ 'ಮಿಲಿಟರಿ ಕಾರ್ಯಾಚರಣೆ' ಘೋಷಿಸಿದ್ದರು. ಅದರಂತೆ, ರಷ್ಯಾ ಸೇನೆ ಆಕ್ರಮಣ ನಡೆಸುತ್ತಿದೆ.

ಉಕ್ರೇನ್‌ನಈಶಾನ್ಯ ಭಾಗದಲ್ಲಿರುವ ಸುಮಿ ನಗರ, ರಷ್ಯಾ ಗಡಿಯಿಂದ ಸುಮಾರು 50 ಮೈಲುಗಳಷ್ಟು ದೂರದಲ್ಲಿದೆ. ಈ ನಗರದ ಮೇಯರ್ ಗುರುವಾರ (ಆಕ್ರಮಣ ಆರಂಭವಾದ ದಿನ) ರಷ್ಯಾ ಪಡೆಗಳಿಗೆ ಶರಣಾಗಿದ್ದಾರೆ.

ಸದ್ಯ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿರುವಬಹುತೇಕ ವಿದ್ಯಾರ್ಥಿಗಳು ಸುಮಿ ಸ್ಟೇಟ್‌ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವವರಾಗಿದ್ದು, ಸ್ಫೋಟದ ಶಬ್ದ ನಿರಂತರವಾಗಿ ಕೇಳುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾವು ಅಡಗಿಕೊಂಡಿರುವ ನೆಲಮಾಳಿಗೆಯ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಲಲಿತ್ ಕುಮಾರ್ ಎಂಬ ವಿದ್ಯಾರ್ಥಿ,'ನಾವು ಉಳಿದುಕೊಂಡಿರುವ ಕಟ್ಟಡದ / ವಿದ್ಯಾರ್ಥಿನಿಲಯದ ನೆಲಮಾಳಿಗೆಯಲ್ಲೇ ನಾವೆಲ್ಲ ಅಡಗಿಕೊಂಡಿದ್ದೇವೆ. ಇಲ್ಲೇ ಇದ್ದರೆ, ಬದುಕುಳಿಯುತ್ತೇವೆಯೇ ಎಂಬುದು ಗೊತ್ತಿಲ್ಲ. ಉಕ್ರೇನ್‌ನ ಪೂರ್ವಭಾಗದಿಂದ ಕೂಡಲೇ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಭಾರತ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ' ಎಂದು ಮನವಿ ಮಾಡಿದ್ದಾರೆ.

'ನಮ್ಮ ತವರಿಗೆ (ಭಾರತಕ್ಕೆ) ಹಿಂತಿರುಗುವುದು ಅಸಾಧ್ಯ. ಸೇನಾಡಳಿತ ಜಾರಿಯಲ್ಲಿದೆ. ಹಾಗಾಗಿ ಹೊರಗೆ ಹೋಗಲಾಗದು. ಬಸ್‌, ಕಾರುಗಳು ಅಥವಾ ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಎಟಿಎಂಗಳು ಮತ್ತು ಸೂಪರ್‌ಮಾರ್ಕೆಟ್‌ಗಳೂ ಕಾರ್ಯಾಚರಿಸುತ್ತಿಲ್ಲ' ಎಂದೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನೆಲಮಾಳಿಗೆಯಲ್ಲಿ ಹೆಚ್ಚು ಕಾಲ ಉಳಿಯುವುದು ಅಸಾಧ್ಯ ಎಂದಿರುವ ಮತ್ತೊಬ್ಬ ವಿದ್ಯಾರ್ಥಿ ಕುಮಾರ್,'ನಾವು ಇಲ್ಲಿಯೇ ಮತ್ತಷ್ಟು ಕಾಲ ಉಳಿಯಲು ಅಗತ್ಯ ವಸ್ತುಗಳ ಪೂರೈಕೆಯಿಲ್ಲ. ಭಾರತ ಸರ್ಕಾರವೇ ನಮ್ಮ ಕೊನೇ ಭರವಸೆ. ನಾವು ನಮ್ಮ ತಾಯ್ನಾಡಿಗೆ ಹಿಂತಿರುಗಲು, ನಮ್ಮ ಪ್ರೀತಿಪಾತ್ರರನ್ನು ನೋಡಲು ಬಯಸುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ' ಎಂದು ಭಾವುಕರಾಗಿದ್ದಾರೆ.

ಭಾರತದವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರುರಷ್ಯಾ–ಉಕ್ರೇನ್ ಸಂಘರ್ಷದ ಕುರಿತು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದರು.ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್‌ನಲ್ಲಿರುವ ನಾಗರಿಕರನ್ನುಭಾರತಕ್ಕೆ ಕರೆತರಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಹಾಗೆಯೇ,20 ಸಾವಿರ ಭಾರತೀಯರು ಉಕ್ರೇನ್‌ನಲ್ಲಿದ್ದು, ಕಳೆದ ಕೆಲವು ದಿನಗಳಿಂದ 4 ಸಾವಿರ ಮಂದಿ ದೇಶಕ್ಕೆ ಮರಳಿದ್ದಾರೆ ಎಂದೂ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT