ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್–ರೊಮೇನಿಯಾ: ಪಾಕಿಸ್ತಾನ, ಟರ್ಕಿ ವಿದ್ಯಾರ್ಥಿಗಳಿಗೂ ನೆರವಾದ ಭಾರತದ ಧ್ವಜ

Last Updated 2 ಮಾರ್ಚ್ 2022, 7:38 IST
ಅಕ್ಷರ ಗಾತ್ರ

ಬುಕಾರೆಸ್ಟ್‌ (ರೊಮೇನಿಯಾ): ಉಕ್ರೇನ್‌ನ ಗಡಿ ಭಾಗಗಳಿಗೆ ತೆರಳಲು ಭಾರತದ ರಾಷ್ಟ್ರ ಧ್ವಜವು ಭಾರತೀಯರಿಗಷ್ಟೇ ಅಲ್ಲದೆ ಪಾಕಿಸ್ತಾನ ಹಾಗೂ ಟರ್ಕಿಯ ಪ್ರಜೆಗಳಿಗೂ ನೆರವಾಗಿದೆ. ತ್ರಿವರ್ಣ ಧ್ವಜದ ಸಹಾಯದಿಂದಾಗಿ ಭಾರತೀಯರೊಂದಿಗೆ ಹಲವು ರಾಷ್ಟ್ರಗಳ ನಾಗರಿಕರು ರೊಮೇನಿಯಾ ತಲುಪಿದ್ದಾರೆ.

ರಷ್ಯಾ ದಾಳಿಗೆ ಒಳಗಾಗಿರುವ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಲು ಭಾರತೀಯ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ಉಕ್ರೇನ್‌ ಗಡಿ ಭಾಗಗಳಿಗೆ ತೆರಳಿ ಅಲ್ಲಿಂದ ರೊಮೇನಿಯಾದ ಬುಕರೆಸ್ಟ್‌ ಪ್ರವೇಶಿಸಿ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ. ಆದರೆ, ಯುದ್ಧ ಪೀಡಿತ ಪ್ರದೇಶಗಳ ಹಲವು ಚೆಕ್‌ಪಾಯಿಂಟ್‌ಗಳನ್ನು ಸುರಕ್ಷಿತವಾಗಿ ದಾಟುವಲ್ಲಿ ದೇಶದ ತ್ರಿವರ್ಣ ಧ್ವಜವು ಪ್ರಮುಖ ಪಾತ್ರವಹಿಸಿದೆ. ಭಾರತದ ವಿದ್ಯಾರ್ಥಿಗಳೊಂದಿಗೆ ಪಾಕಿಸ್ತಾನ ಮತ್ತು ಟರ್ಕಿಯ ವಿದ್ಯಾರ್ಥಿಗಳೂ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ.

ಭಾರತ ಸರ್ಕಾರವು ಉಕ್ರೇನ್‌ನ ನೆರೆಯ ರಾಷ್ಟ್ರಗಳ ಮೂಲಕ ಭಾರತೀಯರನ್ನು ಕರೆ ತರಲು 'ಆಪರೇಷನ್‌ ಗಂಗಾ' ಹೆಸರಿನಲ್ಲಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ. ಏರ್‌ ಇಂಡಿಯಾ, ಸ್ಪೈಸ್‌ಜೆಟ್‌ ಹಾಗೂ ಇಂಡಿಗೊ ವಿಮಾನಗಳು ಹಾರಾಟ ನಡೆಸುತ್ತಿವೆ.

ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹೊರಡುವುದಕ್ಕೂ ಮುನ್ನ ಸ್ಪ್ರೇ ಪೇಯಿಂಟ್‌ಗಳು ಮತ್ತು ಪರದೆಗಳನ್ನು ಖರೀದಿಸಿ ತಂದಿದ್ದರು. ಪರದೆಗಳನ್ನು ಕತ್ತರಿಸಿ, ಅವುಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಿದ್ದರು. ತ್ರಿವರ್ಣ ಧ್ವಜ ಹೊಂದಿರುವ ಪರದೆಗಳನ್ನು ಬಳಸಿ ಚೆಕ್‌ಪಾಯಿಂಟ್‌ಗಳಲ್ಲಿ ಯಾವುದೇ ಆತಂಕ ಇಲ್ಲದೆ ಮುಂದುವರಿದರು. ಅವರೊಂದಿಗೆ ಪಾಕಿಸ್ತಾನ ಮತ್ತು ಟರ್ಕಿಯ ವಿದ್ಯಾರ್ಥಿಗಳೂ ಇದ್ದರು. 'ಅವರೂ ಸಹ ಭಾರತದ ಧ್ವಜದ ನೆರವಿನಿಂದ ಮುಂದೆ ಸಾಗಿದರು' ಎಂದು ಭಾರತದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಉಕ್ರೇನ್‌ನ ಒದೆಸಾದಿಂದ ಬಸ್‌ ಬುಕ್ ಮಾಡಿಕೊಂಡು ಮೊಲೊಡೊವಾ ಗಡಿಗೆ ಪ್ರವೇಶಿಸಿದ್ದಾರೆ. ಅಲ್ಲಿನ ಜನರು ಉಳಿಯಲು ವ್ಯವಸ್ಥೆ ಮಾಡಿದ್ದರು ಹಾಗೂ ರೊಮೇನಿಯಾಗೆ ತೆರಳಲು ಟ್ಯಾಕ್ಸಿ, ಬಸ್‌ಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. 'ಅಲ್ಲಿ ಭಾರತದ ರಾಯಭಾರ ಕಚೇರಿ ಸಹ ವ್ಯವಸ್ಥೆ ಕಲ್ಪಿಸಿತ್ತು' ಎಂದು ವಿದ್ಯಾರ್ಥಿಯೊಬ್ಬರು ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.

ಉಕ್ರೇನ್‌ನ ನೆರೆಯ ರಾಷ್ಟ್ರಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಭಾರತ ಸರ್ಕಾರವು ನಾಲ್ವರು ಕೇಂದ್ರ ಸಚಿವರಿಗೆ ಜವಾಬ್ದಾರಿ ನೀಡಿದೆ.

ಉಕ್ರೇನ್‌ನಲ್ಲಿ ಅಳಲು ತೋಡಿಕೊಂಡಿದ್ದ ಪಾಕಿಸ್ತಾನ ವಿದ್ಯಾರ್ಥಿಗಳು...

ಪಾಕಿಸ್ತಾನದ ವಿದ್ಯಾರ್ಥಿಗಳಿಗೆ ಆ ದೇಶದ ರಾಯಭಾರ ಕಚೇರಿಯಿಂದ ಸಹಕಾರ ಸಿಗದೆ ಸಿಲುಕಿದ್ದರು ಹಾಗೂ ವಿಡಿಯೊ ಹಂಚಿಕೊಳ್ಳುವ ಮೂಲಕ ನೆರವಿಗಾಗಿ ಕೋರಿದ್ದರು. ಭಾರತ ಸರ್ಕಾರವು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವುದಾಗಿ ಭರವಸೆ ನೀಡಿದೆ. ಆದರೆ, ನಮ್ಮ ಸರ್ಕಾರದಿಂದ ಯಾರ ಸಂಪರ್ಕ, ಸಹಕಾರವೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಫೆಬ್ರುವರಿ 25ರಂದು ಟ್ವಿಟರ್‌ನಲ್ಲಿ ಪಾಕಿಸ್ತಾನ ಸಂಸದರು, ಪತ್ರಕರ್ತರು ಸೇರಿದಂತೆ ಹಲವರು ವಿದ್ಯಾರ್ಥಿಗಳ ಪರಿಸ್ಥಿತಿಯ ವಿಡಿಯೊಗಳನ್ನು ಹಂಚಿಕೊಂಡಿದ್ದರು.

'ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿ ತಮ್ಮನ್ನು ತಾವು ರಕ್ಷಿಸಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿರುವುದು ಗೊತ್ತಾಗಿದೆ. ಆದರೆ, ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರ ಸುರಕ್ಷತೆಯನ್ನು ಖಾತ್ರಿ ಪಡಿಸುವವರು ಯಾರು?' ಎಂದು ಪಾಕಿಸ್ತಾನದ ಸಂಸದೆ ಸೆಹರ್‌ ಕಮ್ರಾನ್‌ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT