ಶನಿವಾರ, ಜನವರಿ 22, 2022
16 °C

ಅಮೆರಿಕದ ಎಚ್ಚರಿಕೆ ಕಡೆಗಣನೆ: ರಷ್ಯಾ ಜತೆಗೆ ಭಾರತ ರಕ್ಷಣಾ ಸಹಕಾರ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆರಿಕದ ಜತೆಗಿನ ಸಂಬಂಧಕ್ಕೆ ಧಕ್ಕೆಯಾಗುವ ಆತಂಕದ ನಡುವೆಯೂ ರಷ್ಯಾ ಜತೆಗಿನ ತನ್ನ ಸೇನಾ ತಾಂತ್ರಿಕ ಸಹಕಾರ ವಿಸ್ತರಣೆ ಒಪ್ಪಂದ ಮತ್ತು ರಕ್ಷಣಾ ಸಹಕಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರವು ಸೋಮವಾರ ಸಹಿಮಾಡಿದೆ. ಚೀನಾದ ಅಪ್ರಚೋದಿತ ಅತಿಕ್ರಮಣವನ್ನು ತಡೆಯಲು ರಷ್ಯಾದ ಜತೆಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ರಕ್ಷಣಾ ಸಚಿವಾಲಯವು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಣ ಶೃಂಗಸಭೆಗೆ ಪೂರ್ವಭಾವಿಯಾಗಿ ದೆಹಲಿಯಲ್ಲಿ ನಡೆದ ಎರಡೂ ದೇಶಗಳ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರ ಸಭೆಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ರಷ್ಯಾದಿಂದ ಎಸ್‌–400 ಟ್ರಯಂಪ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ₹39,000 ಕೋಟಿ ವೆಚ್ಚದಲ್ಲಿ ಖರೀದಿಸಲು ಕೇಂದ್ರ ಸರ್ಕಾರವು 2018ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ವಿರುದ್ಧ ಭಾರತದ ಮೇಲೆ ವಾಣಿಜ್ಯ ನಿರ್ಬಂಧ ಹೇರುವ ಎಚ್ಚರಿಕೆಯನ್ನು ಅಮೆರಿಕ ನೀಡಿತ್ತು. ನಿರ್ಬಂಧದಿಂದ ವಿನಾಯಿತಿ ದೊರೆಯುವುದು ಖಚಿತವಾಗದಿದ್ದರೂ ಒಪ್ಪಂದವನ್ನು ಮುಂದುವರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಜತೆಗೆ ಉತ್ತರ ಪ್ರದೇಶದ ಅಮೇಠಿಯಲ್ಲಿ ರಷ್ಯಾದ ಸಹಭಾಗಿತ್ವದಲ್ಲಿ 6.01 ಲಕ್ಷ ಎ.ಕೆ–203 ರೈಫಲ್‌ಗಳನ್ನು ತಯಾರಿಸಲು ₹5,000 ಕೋಟಿ ವೆಚ್ಚದ ಒಪ್ಪಂದವನ್ನು ಸೋಮವಾರ ಅಂತಿಮಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು