ಬುಧವಾರ, ಜನವರಿ 20, 2021
16 °C

ಅಣು ವಿಜ್ಞಾನಿ ಹತ್ಯೆಯಲ್ಲಿ ಇಸ್ರೇಲ್‌ ಕೈವಾಡ? ಇರಾನ್‌ನಿಂದ ಪ್ರತಿಕಾರದ ಎಚ್ಚರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೆಹ್ರಾನ್‌: 'ಅಣು ವಿಜ್ಞಾನಿ ಹತ್ಯೆ ಹಿಂದೆ ಬದ್ಧ ವೈರಿ ಇಸ್ರೇಲ್‌ನ ಕೈವಾಡವಿದೆ' ಎಂದು ದೂಷಿಸಿರುವ ಇರಾನ್‌, ಪ್ರತಿಕಾರ ಪಡೆಯುವ ಎಚ್ಚರಿಕೆ ನೀಡಿದೆ.

ಇರಾನ್‌ನ ಉನ್ನತ ಮಟ್ಟದ ಪರಮಾಣು ವಿಜ್ಞಾನಿ ಮೊಹ್ಸೆನ್ ಫಖ್ರಿಜಾದೆ ಅವರನ್ನು ಉತ್ತರ ಇರಾನ್‌ನಲ್ಲಿ ಶುಕ್ರವಾರ ಗುಂಡಿಕ್ಕಿ ಕೊಲ್ಲಲಾಯಿತು. ಟೆಹ್ರಾನ್‌ನ ಡಮವಾಂಡ್‌ ಪ್ರದೇಶದ ಅಬ್‌ಸಾರ್ದ್‌ ನಗರದಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು. ಫಖ್ರಿಜಾದೆ ಅವರನ್ನು ಇರಾನ್‌ 'ಹುತಾತ್ಮ' ಎಂದು ಕರೆದಿದೆ.

ಈ ಬೆಳವಣಿಗೆಯು ಇರಾನ್ ಮತ್ತು ಅಮೆರಿಕ ಮತ್ತದರ ಮಿತ್ರ ರಾಷ್ಟ್ರ ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆಗಳಿವೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಇದು ದೊಡ್ಡ ಮಟ್ಟದ ಸಂಘರ್ಷಕ್ಕೆ ಎಡೆಮಾಡಿಕೊಡುವ ಮಾತುಗಳೂ ಕೇಳಿಬಂದಿವೆ.

ಹತ್ಯೆಯಲ್ಲಿ 'ಇಸ್ರೇಲಿ ಪಾತ್ರದ ಬಗ್ಗೆ ಬಲವಾದ ಅನುಮಾನಗಳಿವೆ,' ಎಂದು ಇರಾನ್‌ ವಿದೇಶಾಂಗ ಸಚಿವ ಮೊಹಮ್ಮದ್ ಜಾವಾದ್ ಜರೀಫ್ ಹೇಳಿದ್ದಾರೆ.

'ಭಯೋತ್ಪಾದಕರು ಇಂದು ಇರಾನ್‌ನ ಪ್ರಸಿದ್ಧ ವಿಜ್ಞಾನಿಯನ್ನು ಕೊಲೆ ಮಾಡಿದ್ದಾರೆ. ಈ ಹೇಡಿತನದ ಹಿಂದೆ ಇಸ್ರೇಲ್‌ ಪಾತ್ರವಿರುವ ಸೂಚನೆಗಳಿವೆ. ಇದು ದುಷ್ಕರ್ಮಿಗಳ ಹತಾಶೆಯನ್ನು ಪ್ರದರ್ಶಿಸುತ್ತಿದೆ' ಎಂದು ಅವರು ಹೇಳಿದ್ದಾರೆ. ಭಯೋತ್ಪಾದಕರ ಈ ಕೃತ್ಯವನ್ನು ಖಂಡಿಸಬೇಕಿದೆ ಎಂದು ಅವರು ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

'ದಾಳಿಯ ಹಿಂದೆ ಇಸ್ರೇಲ್‌ನ ಕೈವಾಡವಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ಒದಗಿಸಿಲ್ಲ' ಎಂದು ನ್ಯೂಯಾರ್ಕ್‌ ಟೈಮ್ಸ್‌ ಹೇಳಿದೆ.

ಫಖ್ರಿಜಾದೆ ಅವರ ಚಟುವಟಿಕೆಗಳು ಮತ್ತು ವಹಿವಾಟುಗಳು ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿ ಅಮೆರಿಕ 2008ರಲ್ಲಿ ಅವರ ಮೇಲೆ ನಿರ್ಬಂಧ ವಿಧಿಸಿತ್ತು. ವೈರಿ ರಾಷ್ಟ್ರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಫಖ್ರಿಜಾದೆ ಅವರನ್ನು 'ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪಿತಾಮಹಾ' ಎಂದು ಹಿಂದೊಮ್ಮೆ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು