ಗುರುವಾರ , ಮಾರ್ಚ್ 23, 2023
28 °C

ಉಕ್ರೇನ್‌ ಮೇಲೆ ಕ್ಷಿಪಣಿ ದಾಳಿಗೆ ಖಂಡನೆ: ರಷ್ಯಾ ಮೇಲೆ ಜಪಾನ್ ನಿರ್ಬಂಧ ಬಿಗಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಉಕ್ರೇನ್‌ ಮೇಲೆ ರಷ್ಯಾ ಪಡೆಗಳು ಹೊಸದಾಗಿ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್‌ಗಳಿಂದ ಮಾರಕ ದಾಳಿ ನಡೆಸಿರುವುದನ್ನು ಖಂಡಿಸಿರುವ ಜಪಾನ್‌, ರಷ್ಯಾ ಮೇಲೆ ಹೇರಿರುವ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಅಮೆರಿಕ ಮತ್ತು ಜರ್ಮನಿ ಹಾಗೂ ಅದರ ಮಿತ್ರ ರಾಷ್ಟ್ರಗಳು ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಪೂರೈಸಲು ಸಮ್ಮತಿಸಿದ ಮರು ದಿನವೇ ರಷ್ಯಾ, ಗುರುವಾರ ನಸುಕಿನವರೆಗೆ ಮಾರಕ ದಾಳಿ ನಡೆಸಿತ್ತು. ಇದರಿಂದ ಉಕ್ರೇನ್‌ ಪ್ರಮುಖ ಇಂಧನ ಮೂಲಸೌಕರ್ಯಗಳು ಹಾನಿಗೀಡಾಗಿವೆ. ಅಲ್ಲದೆ, ಹತ್ತಾರು ನಾಗರಿಕರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು.

ಜಪಾನ್ ಸೇನಾ ಸಾಮರ್ಥ್ಯ ಹೆಚ್ಚಿಸಲು ಬಳಸಬಹುದಾದ ವಸ್ತುಗಳನ್ನು ರಷ್ಯಾದ 49 ಸಂಸ್ಥೆಗಳಿಗೆ ರಫ್ತು ನಿಷೇಧಿಸಿದೆ. ಇದು ಫೆ.3ರಿಂದ ಜಾರಿಯಾಗಲಿದೆ. ಹೊಸ ನಿರ್ಬಂಧಗಳ ಪಟ್ಟಿಯಲ್ಲಿ ಜಲಫಿರಂಗಿಗಳು, ಅನಿಲ ಪರಿಶೋಧನಾ ಉಪಕರಣಗಳು ಮತ್ತು ಸೆಮಿಕಂಡಕ್ಟರ್‌ಗಳು, ಲಸಿಕೆಗಳು, ಎಕ್ಸರೆ ಉಪಕರಣಗಳು, ಸ್ಫೋಟಕಗಳು ಮತ್ತು ರೋಬೋಟ್‌‌‌ ಉತ್ಪನ್ನಗಳು ಸೇರಿವೆ ಎಂದು ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಏರ್‌ಕ್ರಾಪ್ಟ್‌ ಕಂಪನಿ ಜೆಎಸ್‌ಸಿ ಇರ್ಕಟ್‌ ಕಾರ್ಪ್‌, ವಾಯು ಕ್ಷಿಪಣಿಗಳ ನಿರ್ಮಾಣದ ಎಂಎಂಜಡ್‌ ಅವಂಗಾರ್ಡ್‌ ಕಂಪನಿಗಳ ಆಸ್ತಿ, ರಕ್ಷಣಾ ಖಾತೆ ಉಪ ಸಚಿವ ಮಿಖಾಯಿಲ್‌ ಮಿಜಿಂಟೆವ್ಸ್‌ ಮತ್ತು ನ್ಯಾಯ ಸಚಿವ ಕೊನ್‌ಸ್ಟಾಂಟಿನ್ ಷುಯಿಶೆಂಕೊ ಅವರು ಸೇರಿ, ಆಕ್ರಮಿತ ದಕ್ಷಿಣ ಉಕ್ರೇನ್‌ನಲ್ಲಿ ರಷ್ಯಾ ಪರವಿರುವ 14 ಪ್ರಮುಖರ ವೈಯಕ್ತಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

‘ಸಂಘರ್ಷದ ಆರಂಭದಿಂದಲೂ ಸ್ನೇಹಿಯಲ್ಲದ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಜಪಾನ್‌ ಇಂತಹ ನಿರ್ಬಂಧಗಳನ್ನು ಅನುಸರಿಸಿದರೆ ಅದರೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಅಸಾಧಾರಣವಾದ ಪರಿಣಾಮಗಳು ಬೀರುತ್ತವೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು