ಆತ್ಮಾಹುತಿ ಬಾಂಬ್ ದಾಳಿ– ನಾಲ್ವರ ಸಾವು

ಕರಾಚಿ (ಪಿಟಿಐ): ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಕೃತ್ಯದಲ್ಲಿ ಮೂವರು ಚೀನಾ ಪ್ರಜೆಗಳು ಸೇರಿ ನಾಲ್ವರು ಮೃತಪಟ್ಟಿದ್ದು, ಇತರೆ ಇಬ್ಬರು ಗಾಯಗೊಂಡಿದ್ದಾರೆ.
ವಿಶ್ವವಿದ್ಯಾಲಯ ಆವರಣದ ಕನ್‌ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್ ಬಳಿ ಈ ಕೃತ್ಯ ನಡೆದಿದೆ. ಚೀನಾ ಪ್ರಜೆಗಳಿದ್ದ ವಾಹನವು ವಿ.ವಿ.ಯ ಆವರಣವನ್ನು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ, ಬುರ್ಕಾ ಧರಿಸಿದ್ದ ಮಹಿಳೆಯೊಬ್ಬರು ಸ್ಫೋಟಿಸಿಕೊಂಡು ಕೃತ್ಯ ಎಸಗಿದ್ದಾರೆ.
ಮೃತರಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಮೃತರನ್ನು ಕನ್‌ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಹುಹಾಂಗ್ ಗ್ಯುಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾ ಮತ್ತು ವಾಹನ ಚಾಲಕ ಖಾಲಿದ್ ಎಂದು ಗುರುತಿಸಲಾಗಿದೆ.
ಆತ್ಮಾಹುತಿ ಬಾಂಬ್ ದಾಳಿ ಕೃತ್ಯದ ಹೊಣೆಯನ್ನು ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿಗೆ (ಬಿಎಲ್‌ಎ) ಸೇರಿದ ಮಜೀದ್ ಬ್ರಿಗೇಡ್ ಎಂಬ ಸಂಘಟನೆ ಹೊತ್ತುಕೊಂಡಿದೆ. ‘ಸಂಘಟನೆಯ ಮಹಿಳಾ ಸದಸ್ಯೆಯು ಕಾರ್ಯಗತಗೊಳಿಸಿದ ಮೊದಲ ಆತ್ಮಾಹುತಿ ಬಾಂಬ್ ದಾಳಿ ಇದಾಗಿದೆ. ಸಂಘಟನೆಯ ಸದಸ್ಯೆ ‘ಶಾರಿ ಬಲೂಚ್ ಅಲಿಯಾಸ್ ಬ್ರಂಶ್’ ಈ ಕೃತ್ಯ ಎಸಗಿಸಿದ್ದಾರೆ’ ಎಂದು ಸಂಘಟನೆಯು ಹೇಳಿಕೊಂಡಿದೆ.
ಚೀನಿ ಭಾಷೆ ಬೋಧಕರಿದ್ದ ಈ ವಾಹನಕ್ಕೆ ಭದ್ರತೆ ಒದಗಿಸಲಾಗಿತ್ತು. ವಾಹನದ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ನಾಲ್ವರು ರೇಂಜರ್ ಗಳೂ ಗಾಯಗೊಂಡಿದ್ದಾರೆ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿ ರಾಜಾ ಉಮರ್ ಖತಾಬ್ ಹೇಳಿದರು.
ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಡಿ ಪಾಕಿಸ್ತಾನದಲ್ಲಿ ಚೀನಾದ ಪ್ರಜೆಗಳು ದೊಡ್ಡ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆಯೂ ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಸ್ಫೋಟ ಕೃತ್ಯಗಳು ನಡೆದಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.