ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿದಾಟಿ ಭಾರತಕ್ಕೆ 15 ಸಾವಿರಕ್ಕೂ ಹೆಚ್ಚು ಜನರ ಪ್ರವೇಶ: ವಿಶ್ವಸಂಸ್ಥೆ

ಮ್ಯಾನ್ಮಾರ್ ಬಿಕ್ಕಟ್ಟು ಕುರಿತು ಸಾಮಾನ್ಯಸಭೆಗೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರಸ್‌ ವರದಿ
Last Updated 1 ಅಕ್ಟೋಬರ್ 2021, 5:55 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಮ್ಯಾನ್ಮಾರ್‌ನಲ್ಲಿ ಈ ವರ್ಷದ ಫೆಬ್ರುವರಿ 1ರಂದು ಸೇನಾದಂಗೆ ನಡೆದ ಬಳಿಕ 15,000ಕ್ಕೂ ಅಧಿಕ ಜನರು ಮ್ಯಾನ್ಮಾರ್‌ನಿಂದ ಗಡಿದಾಟಿ ಭಾರತವನ್ನು ಪ್ರವೇಶಿಸಿದ್ದಾರೆ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

ಥೈಲ್ಯಾಂಡ್‌, ಚೀನಾ, ಭಾರತದ ಗಡಿಗೆ ಹೊಂದಿಕೊಂಡಂತೆ ಬಹುತೇಕ ಕಡೆ ಶಸ್ತ್ರಸಜ್ಜಿತ ಘರ್ಷಣೆಗಳು ನಡೆದಿವೆ. ಮ್ಯಾನ್ಮಾರ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪ್ರಾದೇಶಿಕ ವಲಯದಲ್ಲೂ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಗೆ ವರದಿ ನೀಡಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸಲ್ಮಾನರು ಮತ್ತು ಇತರೆ ಅಲ್ಪಸಂಖ್ಯಾತರ ಸ್ಥಿತಿ’ ಶೀರ್ಷಿಕೆ ಕುರಿತ ವರದಿಯಲ್ಲಿ ಅವರು, ಫೆ.1ಕ್ಕೂ ಮುನ್ನ ಮ್ಯಾನ್ಮಾರ್‌ನ ಬಿಕ್ಕಟ್ಟು ಬಾಧಿತ ಪ್ರದೇಶಗಳಿಂದ 3,36,000ಕ್ಕೂ ಹೆಚ್ಚು ಜನ ಹೊರಹೋಗಿದ್ದರು ಎಂದಿದ್ದಾರೆ.

ತದನಂತರ ಬಿಕ್ಕಟ್ಟು ಮತ್ತು ಹಿಂಸಾತ್ಮಕ ಘಟನೆಗಳು ಹೆಚ್ಚಿದಂತೆ ಸುಮಾರು 2,20,000 ಜನರು ಗುಳೆ ಹೋಗಿದ್ದಾರೆ. 15,000ಕ್ಕೂ ಹೆಚ್ಚು ಜನರು ಗಡಿದಾಟಿ ಭಾರತ ಪ್ರವೇಶಿಸಿದ್ದಾರೆ. ಥೈಲ್ಯಾಂಡ್‌ಗೆ 7,000 ಜನರು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಆಗಸ್ಟ್ 15, 2020 ಮತ್ತು ಆಗಸ್ಟ್‌ 14, 2021ರ ಅವಧಿಯ ಬೆಳವಣಿಗೆಗಳನ್ನು ವರದಿ ಒಳಗೊಂಡಿದೆ. ಮ್ಯಾನ್ಮಾರ್ ಮತ್ತು ಭಾರತದ ನಡುವಿನ ಗಡಿ ಉದ್ದ ಸುಮಾರು 1,600 ಕಿ.ಮೀ. ಇದಕ್ಕೆ ಬೇಲಿ ಇಲ್ಲ. ಇದರ ಹೊರತಾಗಿ ಬಂಗಾಳಕೊಲ್ಲಿಯಲ್ಲಿ ಜಲಗಡಿ ಇದೆ. ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ ರಾಜ್ಯಗಳು ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ಇವೆ.

ಗುಟೆರಸ್‌ ಅವರ ವರದಿ ಅನುಸಾರ, ಫೆಬ್ರುವರಿ ನಂತರ ಮ್ಯಾನ್ಮಾರ್‌ನಲ್ಲಿ ಆತಂಕದ ಸ್ಥಿತಿ ಉಲ್ಬಣವಾಗಿದೆ. ರಾಷ್ಟ್ರೀಯ ಕದನವಿರಾಮ ಒಪ್ಪಂದದ ವ್ಯಾಪ್ತಿಗೆ ಬರುವ ಪ್ರದೇಶಗಳೂ ಈ ಸ್ಥಿತಿಗೆ ಹೊರತಾಗಿಲ್ಲ. ಸೇನಾದಂಗೆ ಬಳಿಕ ಅಧಿಕಾರವನ್ನು ಆಕ್ರಮಿಸಿಕೊಂಡ ಸೇನೆಯ ಆಂಗ್ ಸಾನ್‌ ಸೂಕಿ ಮತ್ತು ಅಧ್ಯಕ್ಷ ಯು ವಿನ್‌ ಮಿಂಟ್ ಅವರನ್ನು ಬಂಧಿಸಿದ ಬಳಿಕ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ.

ಥೈಲ್ಯಾಂಡ್, ಚೀನಾ, ಭಾರತಕ್ಕೆ ಹೊಂದಿಕೊಂಡಿರುವ ಬಹುತೇಕ ಪ್ರದೇಶಗಳಲ್ಲಿ ಘರ್ಷಣೆಗಳು ಆಗಿವೆ. ಹೊಸದಾಗಿ ಹುಟ್ಟಿಕೊಂಡ ನಾಗರಿಕ ರಕ್ಷಣಾ ಪಡೆಗಳು ಪ್ರಾದೇಶಿಕ ಮಟ್ಟದ ಪರಿಣಾಮಗಳು ಹಾಗೂ ಬಿಕ್ಕಟ್ಟು ಕುರಿತು ಆತಂಕವನ್ನು ವ್ಯಕ್ತಪಡಿಸಿವೆ ಎಂದಿದ್ದಾರೆ.

ರೋಹಿಂಗ್ಯಾ ಮುಸಲ್ಮಾನರು ಈಗಲೂ ಬಂಗಾಳಕೊಲ್ಲಿ ಮತ್ತು ಅಂಡಮಾನ್‌ ಸಮುದ್ರದ ವ್ಯಾಪ್ತಿಯಲ್ಲಿ ಈಗಲೂ ಅಪಾಯವನ್ನು ಎದುರುಹಾಕಿಕೊಂಡೇ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಜೂನ್‌ ತಿಂಗಳು ರೋಹಿಂಗ್ಯಾಗಳನ್ನು ಕರೆದೊಯ್ಯುತ್ತಿದ್ದ ಮೋಟಾರು ದೋಣಿಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಹಲವು ತಿಂಗಳು ಅತಂತ್ರವಾಗಿತ್ತು. ಹಲವು ನಿರಾಶ್ರಿತರು ಮೃತಪಟ್ಟಿದ್ದರು. ಇನ್ನೊಂದು ದೋಣಿಯನ್ನು ಭಾರತೀಯ ಕರಾವಳಿ ಪಡೆಯ ಫೆಬ್ರುವರಿಯಲ್ಲಿ ರಕ್ಷಣೆ ಮಾಡಿತ್ತು ಎಂದು ಗುಟೆರಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ (ಯುಎನ್‌ಎಚ್‌ಸಿಎಚ್‌ಆರ್‌) ಮೈಕಲ್‌ ಬೆಚಲೆಟ್‌ ಅವರು ಕಳೆದ ವಾರ, ಸೇನಾ ದಂಗೆ ಬಳಿಕ ಮ್ಯಾನ್ಮಾರ್‌ನಲ್ಲಿ 1,200ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 8,000ಕ್ಕೂ ಅಧಿಕ ಜನರ ಬಂಧನವಾಗಿದೆ ಎಂದಿದ್ದಾರೆ. ಸುಮಾರು 120 ಜನರು ಸೇನೆಯ ವಶದಲ್ಲಿದ್ದಾಗ, ಕೆಲವರು ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT