ಮಂಗಳವಾರ, ಏಪ್ರಿಲ್ 13, 2021
23 °C

ಭದ್ರತಾ ಪಡೆ ದಾಳಿ: ಏಳು ನಾಗರಿಕರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್(ಎಪಿ): ಮ್ಯಾನ್ಮಾರ್‌ನಲ್ಲಿ ಫೆಬ್ರುವರಿಯಲ್ಲಿ ನಡೆದ ಮಿಲಿಟರಿ ಕ್ಷಿಪ್ರ ದಂಗೆಯನ್ನು ಪ್ರತಿಭಟನಕಾರರು ಶಿಕಾರಿಯ ನಾಡ ಬಂದೂಕುಗಳ ಮೂಲಕ ಪ್ರತಿರೋಧಿಸಿದ್ದ ಕಾರಣಕ್ಕೆ ಭದ್ರತಾ ಪಡೆಗಳು ಬುಧವಾರ ವಾಯುವ್ಯ ಮ್ಯಾನ್ಮಾರ್‌ನ ಪಟ್ಟಣವೊಂದರ ಮೇಲೆ ದಾಳಿ ನಡೆಸಿ, ಕನಿಷ್ಠ ಏಳು ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಭದ್ರತಾ ಪಡೆಯ ದಾಳಿಯಲ್ಲಿ ಹಲವು ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಕಲಾಯ್‌ ಪಟ್ಟಣದ ಮೇಲೆ ಭದ್ರತಾಪಡೆಯ ದಾಳಿ ಮುಂಜಾನೆ ಪ್ರಾರಂಭವಾಯಿತು. ದಾಳಿಯ ವೇಳೆ ರೈಫಲ್‌ಗಳಿಂದ ಗುಂಡು ಹಾರುವ ಸದ್ದು, ಗ್ರೆನೇಡ್‌ಗಳ ಸ್ಫೋಟ ಮತ್ತು ಹೈ ಕ್ಯಾಲಿಬರ್‌ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ ಎಂದು ಆನ್‌ಲೈನ್ ಸುದ್ದಿ ತಾಣ ಖೋನುಮ್ತುಂಗ್ ಬರ್ಮೀಸ್ ಹೇಳಿದೆ. ಅಲ್ಲದೇ ಈ ದಾಳಿಗೆ ರಾಕೆಟ್‌ ಚಾಲಿತ ಗ್ರೆನೇಡ್‌ಗಳನ್ನು ಬಳಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲೂ ವರದಿಯಾಗಿದೆ. ಆದರೆ, ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ.

ಕಲೆಮಿಯೊ ಎಂದೂ ಕರೆಯಲ್ಪಡುವ ಪಟ್ಟಣದಲ್ಲಿ ಏಳು ಮಂದಿ ಸಾವನ್ನಪ್ಪುವ ಜತೆಗೆ ಹಲವು ಮಂದಿ ಗಾಯಗೊಂಡಿದ್ದಾರೆ. ಮತ್ತಷ್ಟು ಮಂದಿಯನ್ನು ಭದ್ರತಾ ಪಡೆ ಬಂಧಿಸಿವೆ. ಈ ಪಟ್ಟಣದ ಅರ್ಧದಷ್ಟು ಜನಸಂಖ್ಯೆ ಚಿನ್‌ ಜನಾಂಗೀಯ ಅಲ್ಪಸಂಖ್ಯಾತರಿಂದ ಕೂಡಿದೆ. ಫೆಬ್ರುವರಿಯಿಂದ ಈವರೆಗೆ ಮ್ಯಾನ್ಮಾರ್‌ನಲ್ಲಿ 581 ಮಂದಿ ನಾಗರಿಕರು ಭದ್ರತಾಪಡೆಯ ದಾಳಿಗೆ ಬಲಿಯಾಗಿದ್ದಾರೆ.

ಮತ್ತೊಂದು ಆನ್‌ಲೈನ್ ಸುದ್ದಿ ತಾಣವಾದ ಮ್ಯಾನ್ಮಾರ್ ನೌ, ಕಲಾಯ್‌ ಪಟ್ಟಣದಲ್ಲಿ ಪ್ರತಿಭಟನಕಾರರು ಭದ್ರಕೋಟೆಗಳನ್ನು ಸ್ಥಾಪಿಸಿದ್ದಾರೆ. ಭದ್ರತಾ ಪಡೆಗಳಿಗೂ ಸಾವುನೋವುಗಳನ್ನು ಉಂಟು ಮಾಡಿದ್ದಾರೆ ಎಂದು ಮಂಗಳವಾರ ವರದಿ ಮಾಡಿದೆ.

ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟನೆಗಳು ಮಧ್ಯ ಮ್ಯಾನ್ಮಾರ್‌ನ ಮೊಗೊಕ್ ಮತ್ತು ಯಾಂಗೂನ್‌ನ ಈಶಾನ್ಯದ ಬಾಗೊ ಸೇರಿದಂತೆ ಇತರ ನಗರಗಳು ಮತ್ತು ಪಟ್ಟಣಗಳಲ್ಲಿ ಬುಧವಾರ ಕೂಡ ಮುಂದುವರಿದವು. ಭದ್ರತಾ ಪಡೆಗಳು ಪ್ರತಿಭಟನಕಾರರನ್ನು ಗುರಿಯಾಗಿಸಿಕೊಂಡು ನೇರವಾಗಿ ಬಂದೂಕಿನಿಂದ ಗುಂಡುಗಳನ್ನು ಹಾರಿಸಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು