170 ಆನೆಗಳ ಮಾರಾಟಕ್ಕೆ ಮುಂದಾದ ನಮೀಬಿಯಾ

ವಿಂಡ್ಹೋಕ್: ಹೆಚ್ಚುತ್ತಿರುವ ಆನೆಗಳ ಸಂತತಿಯ ಕಡಿವಾಣ ಹಾಗೂ ಬರ ಪರಿಸ್ಥಿತಿ ಮತ್ತು ಮಾನವರ ಜೊತೆ ಸಂಘರ್ಷ ಏರಿಕೆಯಾಗುತ್ತಿರುವ ಕಾರಣದಿಂದಾಗಿ 170 ಆನೆಗಳ ಮಾರಾಟಕ್ಕೆ ನಮೀಬಿಯಾ ಮುಂದಾಗಿದೆ.
ನ್ಯೂ ಇರಾ ಎಂಬ ದಿನಪತ್ರಿಕೆಯಲ್ಲಿ ಹೆಚ್ಚು ಮೌಲ್ಯದ 170 ಆನೆಗಳ ಮಾರಾಟಕ್ಕೆ ಸಂಬಂಧಿಸಿದ ಜಾಹೀರಾತು ಬುಧವಾರ ಪ್ರಕಟವಾಗಿದೆ. ‘ಬರ ಪರಿಸ್ಥಿತಿ ಹಾಗೂ ಆನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ ಆನೆಗಳ ಮಾರಾಟ ಮಾಡಲಾಗುತ್ತಿದೆ’ ಎಂದು ಸಚಿವಾಲಯವು ಉಲ್ಲೇಖಿಸಿದೆ. ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ನಮೀಬಿಯಾದಲ್ಲಿ 28 ಸಾವಿರ ಆನೆಗಳಿವೆ ಎಂದು ಅಂದಾಜಿಸಲಾಗಿದೆ.
‘ಹೆಚ್ಚುತ್ತಿರುವ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಆನೆಗಳನ್ನು ಗುಂಡಿಕ್ಕಿ ಕೊಲ್ಲುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆನೆಗಳ ಮಾರಾಟ ನೀತಿಗೆ ಸರ್ಕಾರವು ಒಪ್ಪಿಗೆ ನೀಡಿದೆ’ ಎಂದು ಪರಿಸರ ಸಚಿವ ಪೊಹಂಬಾ ಶಿಫಿಟಾ ತಿಳಿಸಿದರು. ‘ಆನೆ ಮರಿಗಳು ಸೇರಿದಂತೆ ಒಂದು ಗುಂಪಿನ ಎಲ್ಲ ಆನೆಗಳನ್ನು ಒಟ್ಟಿಗೆ ಮಾರಾಟ ಮಾಡಲಾಗುವುದು. ಇದರಿಂದ ಅವುಗಳ ಸಾಮಾಜಿಕ ಬಂಧವು ಉಳಿಯಲಿದೆ’ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.
ಮಾರಾಟಗಾರರಿಗೆ ಅಜಾಗರೂಕತೆಯಿಂದ ಆನೆಗಳನ್ನು ಮಾರಾಟ ಮಾಡುವುದಿಲ್ಲ. ಇದಕ್ಕೆ ಪೂರಕವಾದ ಎಲ್ಲ ದಾಖಲೆಗಳನ್ನೂ ಖರೀದಿದಾರರು ನೀಡಬೇಕು ಎಂದು ಪೊಹಂಬಾ ತಿಳಿಸಿದರು. ಕಳೆದ ವರ್ಷ ಸರ್ಕಾರವು ಆನೆ, ಜಿರಾಫೆ ಸೇರಿದಂತೆ 1 ಸಾವಿರ ವನ್ಯಜೀವಿಗಳನ್ನು ಮಾರಾಟಕ್ಕೆ ಯೋಜನೆ ರೂಪಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.