ಗುರುವಾರ , ಜೂನ್ 24, 2021
27 °C

ಸರ್ಕಾರ ರಚನೆಗೆ ಹಕ್ಕು ಮಂಡನೆ: ನೇಪಾಳಿ ಕಾಂಗ್ರೆಸ್‌ ನಿರ್ಧಾರ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳದ ಪ್ರಮುಖ ವಿರೋಧ ಪಕ್ಷವಾದ ನೇಪಾಳಿ ಕಾಂಗ್ರೆಸ್‌ ಪಕ್ಷ, ಸರ್ಕಾರ ರಚನೆ ಸಂಬಂಧ ಹಕ್ಕು ಮಂಡಿಸಲು ನಿರ್ಧರಿಸಿದೆ.

ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಮಂಡಿಸಿದ್ದ ವಿಶ್ವಾಸ ಮತಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.

ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನೀಡಿದ್ದ ಗಡುವು ಗುರುವಾರ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆ ತನಗೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ನೇಪಾಳಿ ಕಾಂಗ್ರೆಸ್‌ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಸರತ್ತು ನಡೆಸಿದೆ.

ಪಕ್ಷದ ಅಧ್ಯಕ್ಷ ಶೇರ್‌ ಬಹದ್ದೂರ್ ದೇವುಬಾ ನೇತೃತ್ವದಲ್ಲಿ ನೇಪಾಳಿ ಕಾಂಗ್ರೆಸ್‌ ಮುಖಂಡರು ಮಂಗಳವಾರ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ನಂತರ ಇತರ ಪಕ್ಷಗಳ ಮುಖಂಡ ಸಭೆ ನಡೆಸಿ, ಸರ್ಕಾರ ರಚನೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಪಿಎನ್‌ (ಮಾವೋವಾದಿ ಕೇಂದ್ರ): ಮುಖ್ಯಸ್ಥ ಪುಷ್ಪಕಮಲ್‌ ದಹಾಲ್‌ ‘ಪ್ರಚಂಡ’, ಜನತಾ ಸಮಾಜವಾದಿ ಪಾರ್ಟಿ (ಜೆಎಸ್‌ಪಿ–ಎನ್‌)ಉಪಾಧ್ಯಕ್ಷ ಉಪೇಂದ್ರ ಯಾದವ್‌ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಶೇರ್‌ ಬಹದ್ದೂರ್‌ ದೇವುಬಾ ಅವರು ಪ್ರಧಾನಿಯಾಗುವುದಕ್ಕೆ ಪ್ರಚಂಡ ನೇತೃತ್ವದ ಪಾರ್ಟಿ ಸಮ್ಮತಿಸಿದೆ. ಆದರೆ, ಸಂಸತ್‌ನಲ್ಲಿ 32 ಜನ ಸಂಸದರನ್ನು ಹೊಂದಿರುವ ಜನತಾ ಸಮಾಜವಾದಿ ಪಾರ್ಟಿಯಲ್ಲಿ ಈ ವಿಷಯ ಕುರಿತು ಒಡಕು ಮೂಡಿದೆ.

271 ಸದಸ್ಯ ಬಲದ ನೇಪಾಳದ ಸಂಸತ್‌ನಲ್ಲಿ ನೇಪಾಳಿ ಕಾಂಗ್ರೆಸ್‌ 61 ಸ್ಥಾನ ಹಾಗೂ ಸಿಪಿಎನ್‌(ಮಾವೋವಾದಿ ಕೇಂದ್ರ) 49 ಸ್ಥಾನಗಳನ್ನು ಹೊಂದಿವೆ. ಹೀಗಾಗಿ ಜೆಎಸ್‌ಪಿ–ಎನ್‌ ಬೆಂಬಲ ಇಲ್ಲದೆಯೇ ನೇಪಾಳಿ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಲಾಗುವುದಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು