ಶನಿವಾರ, ಜನವರಿ 23, 2021
22 °C

ಉತ್ತರ ಕೊರಿಯಾ: ಪತ್ರದ ಮೂಲಕ ಹೊಸ ವರ್ಷಕ್ಕೆ ಶುಭಾಶಯ ಕೋರಿದ ಕಿಮ್ ಜಾಂಗ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸಿಯೊಲ್: ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಅವರು ಹೊಸ ವರ್ಷದ ಸಲುವಾಗಿ ತಮ್ಮ ದೇಶದ ಜನತೆಗೆ ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ. ಜೊತೆಗೆ ಕೋವಿಡ್–19ನಂತಹ ಸಂಕಷ್ಟ ಸಂದರ್ಭದಲ್ಲಿ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ವರ್ಷದ ಮೊದಲ ದಿನದಂದು ಸಾಮಾನ್ಯವಾಗಿ ದೂರದರ್ಶನದಲ್ಲಿ (ಟಿವಿ) ಮಾತನಾಡುವ, ಕಿಮ್‌ ಈ ಬಾರಿ ಟಿವಿ ಕಾರ್ಯಕ್ರಮವನ್ನು ಕೈಬಿಡಲಿದ್ದಾರೆ ಎನ್ನಲಾಗಿದೆ. ‘ನಮ್ಮ ಜನರ ಧ್ಯೇಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ನವಯುಗವನ್ನು ರೂಪಿಸಲು ಶ್ರಮಿಸುತ್ತೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಸಂಕಷ್ಟದ ಸಮಯದಲ್ಲಿಯೂ ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟ ಮತ್ತು ಬೆಂಬಲಿಸಿದ ಜನರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ದೇಶದಾದ್ಯಂತ ಇರುವ ಎಲ್ಲ ಕುಟುಂಬಗಳು ಹಾಗೂ ಪ್ರೀತಿಯ ಜನತೆಗೆ ಉತ್ತಮ ಆರೋಗ್ಯ ಮತ್ತು ಸಂತಸ ಸಿಗಲೆಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. 1995ರ ಬಳಿಕ ದೇಶದ ಜನರಿಗೆ ಪತ್ರ ರವಾನಿಸಿದ ಮೊದಲ ನಾಯಕ ಎನಿಸಿದ್ದಾರೆ ಕಿಮ್‌. ಸದ್ಯ ಕೊರಿಯಾದಲ್ಲಿ 2.5 ಕೋಟಿ ಜನಸಂಖ್ಯೆಯಿದ್ದು, ಎಲ್ಲರಿಗೂ ಪತ್ರ ಕಳುಹಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ತಮ್ಮ ತಂದೆ ಕಿಮ್‌ ಜಾಂಗ್-ಇಲ್‌ ಅವರ ಬಳಿಕ 2011ರಿಂದ ದೇಶ ಮುನ್ನಡೆಸುತ್ತಿರುವ ಕಿಮ್‌ ಆಡಳಿತಾವಧಿಯಲ್ಲಿ ಕೊರಿಯಾ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಅಣ್ವಸ್ತ್ರ ಪ್ರಯೋಗ ಯೋಜನೆಗಳಿಗೆ ವಿರುದ್ಧವಾಗಿ ಅಮೇರಿಕ ನೇತೃತ್ವದಲ್ಲಿ ಅಂತರರಾಷ್ಟ್ರೀಯ ನಿರ್ಬಂಧವೂ ಸೇರಿದಂತೆ, ಕೋವಿಡ್‌–19 ಹಾಗೂ ಪ್ರಾಕೃತಿಕ ವಿಕೋಪಗಳು ಈ ದೇಶವನ್ನು ಬಾಧಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು