ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ದಿಢೀರ್ ರಾಜೀನಾಮೆ

ಪಕ್ಷದ ಸಭೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಜಸಿಂಡಾ
Last Updated 19 ಜನವರಿ 2023, 20:23 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜಸಿಂಡ ಆರ್ಡರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದು, ಅಚ್ಚರಿಗೆ ಕಾರಣವಾಗಿದೆ.

42 ವರ್ಷದ ಜಸಿಂಡ ಅವರು ಲೇಬರ್‌ ಪಾರ್ಟಿ ನಾಯಕಿ. ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ‘ಫೆ.7ರ ಒಳಗಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ’ ಎಂದು ಹೇಳಿದರು.

‘ಅಕ್ಟೋಬರ್‌ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ದೇಶವು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದೆ’ ಎಂದೂ ಅವರು ಹೇಳಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿಯಾಗಿ ಫೆ. 7 ನನ್ನ ಕೊನೆಯ ದಿನ’ ಎಂದು ಭಾವುಕರಾಗಿ ನುಡಿದರು.

‘ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಎಲ್ಲಿಯವರೆಗೆ ಸಾಧ್ಯವಾಗುತ್ತದೆಯೋ ಅಲ್ಲಿವರೆಗೆ ಕರ್ತವ್ಯ ನಿಭಾಯಿಸಬಲ್ಲೆವು. ನಾನೂ ಮನುಷ್ಯಳೆ. ಈಗ ನನ್ನ ಸರದಿ ಬಂದಿದೆ’ ಎಂದು ಸೂಚ್ಯವಾಗಿ ಹೇಳಿದರು.

‘ದೇಶವನ್ನು ಮುನ್ನಡೆಸುವ ಅವಕಾಶ ಸಿಗುವುದು ಯಾರಿಗೇ ಅಗಲಿ ದೊಡ್ಡ ಗೌರವದ ಸಂಗತಿ ಎಂದು ನಾನು ನಂಬಿರುವೆ. ಅಲ್ಲದೇ, ಅದು ದೊಡ್ಡ ಸವಾಲಿನ ಕೆಲಸವೂ ಆಗಿದೆ’ ಎಂದರು.

ಲೇಬರ್‌ ಪಾರ್ಟಿಗೆ ಭಾರಿ ಬಹುಮತ ದೊರೆತು, ಆಡಳಿತದ ಚುಕ್ಕಾಣಿ ಹಿಡಿದಾಗ, ಜಸಿಂಡಾ ಅವರು ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೇರಿದರು.

ನೈಸರ್ಗಿಕ ವಿಕೋಪ, ಕೋವಿಡ್‌–19 ಪಿಡುಗಿನ ವೇಳೆ, ಅವರು ದೇಶವನ್ನು ಮುನ್ನಡೆಸಿದ ರೀತಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, 2019ರಲ್ಲಿ ಕ್ರೈಸ್ಟ್‌ಚರ್ಚ್‌ ಮಸೀದಿ ಮೇಲೆ ನಡೆದಿದ್ದ ಉಗ್ರರ ದಾಳಿಯನ್ನು ನಿಭಾಯಿಸಿದ್ದು ಅಂತರರಾಷ್ಟ್ರೀಯ ಗಮನ ಸೆಳೆದಿತ್ತು. ಈ ದಾಳಿಯಲ್ಲಿ 51 ಮುಸ್ಲಿಮರು ಮೃತ್ತಪಟ್ಟು, ಇತರ 40 ಮಂದಿ ಗಾಯಗೊಂಡಿದ್ದರು.

2020ರ ವೇಳೆಗೆ ಜಸಿಂಡ ಅವರ ಜನಪ್ರಿಯತೆ ಹೆಚ್ಚಿತ್ತು. ಆದರೆ, ನಂತರದ ದಿನಗಳಲ್ಲಿ ದೇಶದಲ್ಲಿ ಕಂಡುಬಂದ ಹಣದುಬ್ಬರ, ಆರ್ಥಿಕ ಹಿಂಜರಿತ ಅವರ ಜನಪ್ರಿಯತೆಯನ್ನು ಮಸುಕಾಗಿಸಿತು. ಇನ್ನೊಂದೆಡೆ, ವಿರೋಧ ಪಕ್ಷ ಪುಟಿದೆದ್ದದ್ದು ಕೂಡ ಅವರಿಗೆ ಹಿನ್ನಡೆಯಂಟು ಮಾಡಿತು.

ವ್ಯಾಪಕ ಪ್ರತಿಕ್ರಿಯೆ: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡ ಆರ್ಡರ್ನ್ ಅವರ ದಿಢೀರ್‌ ರಾಜೀನಾಮೆಗೆ ವಿಶ್ವ ನಾಯಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯಾಗಿ ಅವರ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ಅಗಾಧ ಒಳನೋಟ ಹಾಗೂ ಬಲಿಷ್ಠ ನಾಯಕತ್ವದ ಗುಣಗಳು ಅವರಲ್ಲಿದ್ದವು’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೊನಿ ಅಲ್ಬನೀಸ್‌ ಪ್ರತಿಕ್ರಿಯಿಸಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ, ‘ಕೆನಡಾದೊಂದಿಗಿನ ನಿಮ್ಮ ಸ್ನೇಹ ಹಾಗೂ ಪಾಲುದಾರಿಕೆಗೆ ಧನ್ಯವಾದಗಳು. ನಿಮ್ಮ ಕೊಡುಗೆ ಅಗಾಧ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶುಭ ಕೋರುವೆ’ ಎಂದಿದ್ದಾರೆ.

ನ್ಯೂಜಿಲೆಂಡ್‌ನ ಉಪಪ್ರಧಾನಿ ಗ್ರ್ಯಾಂಟ್‌ ರಾಬರ್ಟ್‌ಸನ್, ವಿರೋಧ ಪಕ್ಷದ ನಾಯಕ ಕ್ರಿಸ್ಟೋಫರ್ ಲಕ್ಸನ್, ಹಾಲಿವುಡ್‌ ನಟ ಸ್ಯಾಮ್ ನೀಲ್‌ ಅವರೂ, ಈ ಬೆಳವಣಿಗೆ ಕುರಿತು ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ಜಸಿಂಡ ಅವರಿಗೆ ಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT