ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್ಡ ಬಿಡಿ, ವಸ್ತ್ರ ಸಂಹಿತೆ ಪಾಲಿಸಿ ಕೆಲಸ ಉಳಿಸಿಕೊಳ್ಳಿ: ತಾಲಿಬಾನ್

Last Updated 28 ಮಾರ್ಚ್ 2022, 14:51 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗಿರುವ ಅಲ್ಲಿನ ತಾಲಿಬಾನ್ ಸರ್ಕಾರ, ಇದೀಗ ಎಲ್ಲ ಸರ್ಕಾರಿ ನೌಕರರು ಗಡ್ಡ ಬಿಡುವಂತೆ ಸೂಚಿಸಿದೆ ಎಂದು ಮೂಲಗಳನ್ನು ಉದ್ದೇಶಿಸಿ ರಾಯಿಟರ್ಸ್ ವರದಿ ಮಾಡಿದೆ.

ಗಡ್ಡ ಬಿಡಿ ಮತ್ತು ಕೆಲಸ ಕಳೆದುಕೊಳ್ಳುವುದರಿಂದ ಪಾರಾಗಲು ವಸ್ತ್ರ ಸಂಹಿತೆ ನಿಯಮವನ್ನು ಅನುಸರಿಸಿ ಎಂದು ಇಸ್ಲಾಂ ಮೂಲಭೂತವಾದಿ ಆಡಳಿತವು ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

ನೌಕರರು ಹೊಸ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸದ್ಗುಣಗಳ ಪ್ರಚಾರ ಮತ್ತು ಕೆಟ್ಟ ನಡವಳಿಕೆ ತಡೆಗಟ್ಟುವಿಕೆ ಸಚಿವಾಲಯದ ಪ್ರತಿನಿಧಿಗಳು ಸೋಮವಾರ ಸರ್ಕಾರಿ ಕಚೇರಿಗಳ ಪ್ರವೇಶದ್ವಾರಗಳಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೌಕರರು ತಮ್ಮ ಗಡ್ಡವನ್ನು ಬೋಳಿಸದಂತೆ ಮತ್ತು ಉದ್ದ, ಸಡಿಲವಾದ ಅಂಗಿ, ಪ್ಯಾಂಟ್ ಹಾಗೂ ಟರ್ಬನ್ ಒಳಗೊಂಡಿರುವ ಸ್ಥಳೀಯ ಉಡುಪುಗಳನ್ನು ಧರಿಸಲು ಸೂಚಿಸಲಾಗಿದೆ. ಅವರು ಸರಿಯಾದ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಎರಡು ಮೂಲಗಳು ತಿಳಿಸಿವೆ.

ಗಡ್ಡ ಬಿಡುವುದು ಮತ್ತು ವಸ್ತ್ರ ಸಂಹಿತೆ ಪಾಲಿಸದಿದ್ದರೆ ನೌಕರರಿಗೆ ಕಚೇರಿಗಳಿಗೆ ಪ್ರವೇಶ ನಿಷೇಧಿಸಲಾಗುತ್ತದೆ. ಅಂತಿಮವಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ನೀತಿ ಸಚಿವಾಲಯದ ವಕ್ತಾರರು ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ, ಪುರುಷನೊಬ್ಬ ಜೊತೆಯಲ್ಲಿಲ್ಲದಿದ್ದರೆ ಮಹಿಳೆಯರು ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿರುವ ತಾಲಿಬಾನ್, ಭರವಸೆ ನೀಡಿದಂತೆ ಬಾಲಕಿಯರ ಶಾಲೆಗಳನ್ನು ತೆರೆಯಲು ವಿಫಲವಾಗಿದೆ.

ಜೊತೆಗೆ, ಲಿಂಗದ ಆಧಾರದ ಮೇಲೆ ಉದ್ಯಾನಗಳಿಗೆ ಪ್ರವೇಶಕ್ಕೆ ಕಠಿಣ ನಿಯಮ ಜಾರಿ ಮಾಡಿದೆ. ಮಹಿಳೆಯರು ವಾರದಲ್ಲಿ ಮೂರು ದಿನಗಳು ಮತ್ತು ಪುರುಷರಿಗೆ ವಾರಾಂತ್ಯ ಸೇರಿದಂತೆ ಇತರ ನಾಲ್ಕು ದಿನಗಳ ಕಾಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ವಿವಾಹಿತರು ಮತ್ತು ಕುಟುಂಬಗಳು ಸಹ ಒಟ್ಟಿಗೆ ಭೇಟಿ ನೀಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT