ಮಂಗಳವಾರ, ಸೆಪ್ಟೆಂಬರ್ 21, 2021
21 °C
ಪರಸ್ಪರ ದೋಷಾರೋಪದಲ್ಲಿ ಭಾರತ–ಚೀನಾ ಮಾತುಕತೆ ಅಂತ್ಯ

ಚೀನಾ ಗಡಿ ಬಿಕ್ಕಟ್ಟು: ಮಾಸ್ಕೊದಲ್ಲೂ ಸಿಗದ ಪರಿಹಾರ!

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಶುಕ್ರವಾರ ರಾತ್ರಿ ಭಾರತ–ಚೀನಾ ಮಧ್ಯೆ ಎರಡೂವರೆ ತಾಸು ನಡೆದ ಉನ್ನತ ಮಟ್ಟದ ಮಾತುಕತೆ ಪರಸ್ಪರ ದೋಷಾರೋಪಣೆಗಳೊಂದಿಗೆ ಕೊನೆಗೊಂಡಿದ್ದು, ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ. 

ಲಡಾಖ್‌ ಸಂಘರ್ಷದ ನಂತರ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ರಕ್ಷಣಾ ಸಚಿವರ ಸಮಾವೇಶದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಚೀನಾ ರಕ್ಷಣಾ ಸಚಿವ ವೈ ಫೆಂಗ್ ಮಾತುಕತೆ ಸಹಜವಾಗಿ  ಮಹತ್ವ ಪಡೆದುಕೊಂಡಿತ್ತು.

ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಗೆ ಯಾರು ಹೊಣೆ ಎಂಬ ಪ್ರಶ್ನೆ ಎರಡೂ ರಾಷ್ಟ್ರಗಳ ಕೆಸರೆರಚಾಟಕ್ಕೂ ನಾಂದಿ ಹಾಡಿತು. ಸಭೆಯ ನಂತರ ಎರಡೂ ರಾಷ್ಟ್ರಗಳು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.  

ಗಡಿಯಲ್ಲಿ ನಿರ್ಮಾಣವಾಗಿರುವ ಸಂಘರ್ಷ ಸ್ಥಿತಿಗೆ ಭಾರತವೇ ಸಂಪೂರ್ಣ ಹೊಣೆ ಎಂದು ಚೀನಾ ನೇರವಾಗಿ ಆರೋಪಿಸಿದೆ. ‘ಮೊದಲು ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸುವುದನ್ನು ಕಲಿಯಿರಿ’ ಎಂದು ಭಾರತ ತಿರುಗೇಟು ನೀಡಿದೆ. 

ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಸೇನೆಯ ಆಕ್ರಮಣಶೀಲ ಮನೋಭಾವ ಮತ್ತು ಎಲ್‌ಎಸಿಯಲ್ಲಿ ಯಥಾಸ್ಥಿತಿ ಬದಲಾಯಿಸುವ ದುಸ್ಸಾಹಸದ ಬಗ್ಗೆ ರಾಜನಾಥ್‌ ಸಿಂಗ್‌ ಅವರು ಸಭೆಯಲ್ಲಿ ಹರಿಹಾಯ್ದರು ಎಂದು ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ಹೇಳಿದೆ.‌

‘ಗಡಿಯಲ್ಲಿ ನಿಯೋಜಿಸಿರುವ ಸೇನೆಯನ್ನು ಚೀನಾ ತಕ್ಷಣ ವಾಪಸ್‌ ಕರೆಸಿಕೊಂಡರೆ ಮಾತ್ರ ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಬದ್ಧ’ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 

‘ಗಡಿಯಲ್ಲಿ ಸೇನೆ ಜಮಾವಣೆಗೊಳಿಸುತ್ತಿರುವ ಭಾರತ ಜವಾಬ್ದಾರಿಯಿಂದ ನುಣಚಿಕೊಳ್ಳಲು ಸಾಧ್ಯವಿಲ್ಲ. ಚೀನಾ ತನ್ನ ಒಂದಿಂಚೂ ನೆಲವನ್ನು ಬಿಟ್ಟುಕೊಡುವುದಿಲ್ಲ’ ಎಂದು ಚೀನಾ ರಕ್ಷಣಾ ಸಚಿವ ಜನರಲ್‌ ಫೆಂಗ್‌ ಸ್ಪಷ್ಟಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು