ಬುಧವಾರ, ಮೇ 18, 2022
29 °C
ವಿವಿಧ ಸಾಂವಿಧಾನಿಕ ಸಂಸ್ಥೆಗಳಿಗೆ ಸದಸ್ಯರ ನೇಮಕಕ್ಕೆ ವಿರೋಧ

ನೇಪಾಳದಲ್ಲಿ ಮುಷ್ಕರ: ಜನಜೀವನ ಅಸ್ತವ್ಯಸ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳ ಕಮ್ಯುನಿಸ್ಟ್‌ ಪಕ್ಷ ರಾಷ್ಟ್ರದಾದ್ಯಂತ ಗುರುವಾರ ಕರೆ ನೀಡಿದ್ದ ಮುಷ್ಕರದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.

ಪ್ರಧಾನಿ ಕೆ. ಪಿ. ಶರ್ಮಾ ಒಲಿ ನೇತೃತ್ವದ ಉಸ್ತುವಾರಿ ಸರ್ಕಾರ ವಿವಿಧ ಸಾಂವಿಧಾನಿಕ ಸಂಸ್ಥೆಗಳಿಗೆ ಸದಸ್ಯರು ಮತ್ತು ಪದಾಧಿಕಾರಿಗಳನ್ನು ನೇಮಿಸಿರುವುದನ್ನು ವಿರೋಧಿಸಿ ಪುಷ್ಪಕಮಲ್‌ ದಹಾಲ್‌ ‘ಪ್ರಚಂಡ’ ನೇತೃತ್ವದ ಬಣ ಈ ಮುಷ್ಕರಕ್ಕೆ ಕರೆ ನೀಡಿತ್ತು.

ಹೊಸ ನೇಮಕಾತಿಗಳನ್ನು ಮಾಡಲು ಉಸ್ತುವಾರಿ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಹೀಗಾಗಿ, ಈ ನೇಮಕಾತಿಗಳು ಸಾಂವಿಧಾನ ಬಾಹಿರವಾಗಿವೆ ಮತ್ತು ಸರ್ಕಾರದ ಸರ್ವಾಧಿಕಾರಿತನವನ್ನು ಪ್ರದರ್ಶಿಸುತ್ತದೆ ಎಂದು ಪ್ರಚಂಡ ನೇತೃತ್ವದ ಬಣ ಆರೋಪಿಸಿತ್ತು.

ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ ಮತ್ತು ಕಾರ್ಖಾನೆಗಳು ಮುಚ್ಚಿದ್ದವು. ಸಾರಿಗೆ ಸಂಚಾರ ಸೇವೆಯೂ ಸ್ಥಗಿತಗೊಂಡಿತ್ತು.  ಭದ್ರತೆ ಕಲ್ಪಿಸಲು ಸರ್ಕಾರ ಐದು ಸಾವಿರ ಪೊಲೀಸರನ್ನು ಕಠ್ಮಂಡು ನಗರದಲ್ಲಿ ನಿಯೋಜಿಸಿತ್ತು.

‘ಪ್ರಚಂಡ’ ನೇತೃತ್ವದ ಬಣಕ್ಕೆ ಸೇರಿದ ಸುಮಾರು 157 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಕಮ್ಯುನಿಸ್ಟ್‌ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾದ ಅಷ್ಟ ಲಕ್ಷ್ಮಿ ಶಕ್ಯಾ, ಹಿಮಲ್‌ ಶರ್ಮಾ ಮತ್ತು ಅಮೃತಾ ಥಾ ಬಂಧನಕ್ಕೆ ಒಳಗಾದವರಲ್ಲಿ ಪ್ರಮುಖರಾಗಿದ್ದಾರೆ. ಪ್ರತಿಭಟನಾಕಾರರು ಮೂರು ವಾಹನಗಳಿಗೆ ಹಾನಿ ಮಾಡಿದ್ದಾರೆ.

ಡಿಸೆಂಬರ್‌ 20ರಂದು ಒಲಿ ಅವರು ದಿಢೀರನೆ ಸಂಸತ್‌ ವಿಸರ್ಜಿಸಿದ ಬಳಿಕ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಒಲಿ ಅವರ ನಿರ್ಧಾರಕ್ಕೆ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಪ್ರಚಂಡ ನೇತೃತ್ವದ ಬಣ ವಿರೋಧ ವ್ಯಕ್ತಪಡಿಸಿತ್ತು.

ಆದರೆ, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಚಂಡ ನೇತೃತ್ವದ ಬಣ ಯೋಜನೆ ರೂಪಿಸಿತ್ತು. ಹೀಗಾಗಿಯೇ ಸಂಸತ್‌ ವಿಸರ್ಜಿಸಲಾಯಿತು ಎಂದು ಒಲಿ ಸಮರ್ಥಿಸಿಕೊಂಡಿದ್ದರು.

2018ರ ಮೇ ತಿಂಗಳಲ್ಲಿ ಒಲಿ ನೇತೃತ್ವದ ಸಿಪಿಎನ್‌–ಯುಎಂಎಲ್‌ ಮತ್ತು ಪ್ರಚಂಡ ನೇತೃತ್ವದ ಎನ್‌ಸಿಪಿ (ಮಾವೋವಾದಿ ಕೇಂದ್ರ) ವಿಲೀನಗೊಂಡು ನೇಪಾಳ ಕಮ್ಯುನಿಸ್ಟ್‌ ಪಕ್ಷವನ್ನು ರಚಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು