ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಗಾಂಗ್ ಸರೋವರ ಬಳಿ ಮತ್ತೊಂದು ಸೇತುವೆ ನಿರ್ಮಿಸುತ್ತಿರುವ ಚೀನಾ ಸೇನೆ

Last Updated 19 ಮೇ 2022, 2:27 IST
ಅಕ್ಷರ ಗಾತ್ರ

ಲಡಾಕ್: ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರದ ಬಳಿ ಚೀನಾ ಸೇನೆಯು ಮತ್ತೊಂದು ಸೇತುವೆಯನ್ನು ನಿರ್ಮಿಸುತ್ತಿರುವುದು ಉಪಗ್ರಹದ ಚಿತ್ರಗಳಿಂದ ಪತ್ತೆಯಾಗಿದೆ. ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ಸುಗಮ ಸಂಚಾರಕ್ಕಾಗಿ ಈ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹೊಸ ಸೇತುವೆಯು ಸರೋವರದ ಉತ್ತರ ಭಾಗದಲ್ಲಿರುವ ಫಿಂಗರ್ 8 ಪ್ರದೇಶಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಮೂಲಕ ಚೀನಾ ಭಾಗದ ಕೆಳಹಂತದ ಪ್ರದೇಶಗಳ ನಡುವಿನ ಅಂತರವನ್ನು ತಗ್ಗಿಸುತ್ತದೆ.

ಹೊಸ ಸೇತುವೆಯ ನಿರ್ಮಾಣವು ಪೂರ್ವ ಲಡಾಕ್‌ನಲ್ಲಿ ನಡೆಯುತ್ತಿರುವ ಚೀನಾ ಸೇನೆಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯದ ಮುಂದುವರಿದ ಭಾಗವಾಗಿದೆ. ಇದರಡಿಯಲ್ಲಿ ಒಂದು ತಿಂಗಳ ಹಿಂದೆ ಸಣ್ಣ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದ ಸರೋವರದ ಸುತ್ತಲೂ ಸೇನಾ ಪಡೆಗಳ ತ್ವರಿತ ಚಲನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇತುವೆ ಮೂಲಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.

ಹೊಸ ಸೇತುವೆಯು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಸೇತುವೆಯು ಚೀನಾ ಸೇನೆಯ ಮುಖ್ಯ ಕಾರ್ಯಾಚರಣೆಯ ಪ್ರದೇಶವಾದ ಖುರ್ನಾಕ್ ಫೋರ್ಟ್ ಮತ್ತು ರುಟೊಗ್ ನಡುವಿನ ಅಂತರವನ್ನು (ಪ್ರಸ್ತುತ 180 ಕಿಮೀ) ಗಣನೀಯವಾಗಿ ತಗ್ಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಜನವರಿ ಮತ್ತು ಏಪ್ರಿಲ್ ನಡುವೆ ನಿರ್ಮಿಸಲಾದ ಮೊದಲ ಸೇತುವೆಯನ್ನು ದೊಡ್ಡ ಸೇತುವೆ ನಿರ್ಮಾಣಕ್ಕೆ ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ಸಾಗಿಸಲು ಸೇವೆಯ ಕೊಂಡಿಯಾಗಿ ಬಳಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಶಸ್ತ್ರಸಜ್ಜಿತ ವಾಹನಗಳನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಸೇನೆಯ ಇಂತಹ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ವಾಸ್ತವ ಗಡಿ ರೇಖೆ(ಎಲ್‌ಎಸಿ)ಯಿಂದ ದೂರ ಸರಿಯಲು ಚೀನಾ ಒಪ್ಪದಿರುವುದರ ಸೂಚನೆಗಳಾಗಿವೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT