ಮಂಗಳವಾರ, ಜನವರಿ 25, 2022
28 °C

ಓಮೈಕ್ರಾನ್ ಸೌಮ್ಯ ಎಂದು ನಿರ್ಲಕ್ಷಿಸುವಂತಿಲ್ಲ: ಡಬ್ಲ್ಯುಎಚ್‌ಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಏಷ್ಯಾದ ನೈಋತ್ಯ ಭಾಗದ ದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದ ಸಾರ್ವಜನಿಕ ಆರೋಗ್ಯ ಮತ್ತು ಅಂತರ ಕಾಯ್ದುಕೊಳ್ಳುವಿಕೆಯ ವಿಚಾರದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಶನಿವಾರ ಕರೆ ನೀಡಿದೆ. 

ಓಮೈಕ್ರಾನ್‌ ರೂಪಾಂತರಿ ತಳಿಯ ಸೋಂಕು ಸೌಮ್ಯ ಎಂದು ಕಂಡುಬಂದರೂ ಅದನ್ನು ‘ಸೌಮ್ಯ’ ಎಂದು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದೆ.

‘ವೈರಾಣು ಮತ್ತಷ್ಟು ಹರಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಸರ್ಕಾರಗಳು ಜಾರಿ ಮಾಡಬೇಕು. ಜನರು ಈ ಕ್ರಮಗಳಿಗೆ ಬದ್ಧರಾಗಿರಬೇಕು. ಮಾಸ್ಕ್‌ಗಳು, ಕೈಗಳ ಸ್ವಚ್ಛತೆ, ಕೆಮ್ಮುವಾಗ ಮತ್ತು ಸೀನುವಾಗ ಅನುಸರಿಸುವ ಕ್ರಮಗಳು, ಗಾಳಿಯಾಡುವಂಥ ಒಳಾಂಗಣ ವ್ಯವಸ್ಥೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿ ಪಾಲಿಸಬೇಕಾದ ಕ್ರಮಗಳು’  ಎಂದು ಡಬ್ಲ್ಯುಎಚ್‌ಒ ನೈಋತ್ಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್‌ ಸಿಂಗ್‌ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಓಮೈಕ್ರಾನ್‌ ಅತ್ಯಂತ ಪ್ರಮುಖ ತಳಿ ಆಗಿ ಹೊರಹೊಮ್ಮಿದೆ. ಅತ್ಯಂತ ವೇಗವಾಗಿ ಹರಡುವ ಈ ತಳಿಯ ಸೋಂಕಿನಿಂದ ಜಗತ್ತಿನ ಹಲವೆಡೆ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಆಸ್ಪತ್ರೆ ದಾಖಲಾತಿ ಮತ್ತು ಸಾವುಗಳನ್ನು ನಾವು ನೋಡುತ್ತಿದ್ದೇವೆ. ವರದಿ ಆಗುತ್ತಿರುವ ಎಲ್ಲಾ ಕೊರೊನಾ ಪ್ರಕರಣಗಳೂ ಓಮೈಕ್ರಾನ್‌ ತಳಿ ಸೋಂಕು ಅಲ್ಲ ಎಂಬುದನ್ನು ನಾವು ಮರೆಯಬಾರದು. ಡೆಲ್ಟಾ ಸೇರಿ ಇತರ ಕೊರೊನಾ ತಳಿಗಳ ಸೋಂಕು ಕೂಡಾ ಹರಡುತ್ತಿದೆ. ಅವುಗಳಿಂದ ಗಂಭೀರವಾದ ಸೋಂಕು ಮತ್ತು ಸಾವುಗಳು ಸಂಭವಿಸುತ್ತಿರುವುದು ನಮಗೆ ತಿಳಿದಿದೆ. ಕೋವಿಡ್‌–19ನ ಎಲ್ಲಾ ಪ್ರಕರಣಗಳೂ ಕಳವಳಕ್ಕೆ ಕಾರಣವಾಗಿವೆ’ ಎಂದರು. 

ಕೋವಿಡ್‌ ತಡೆಯಲು ಲಸಿಕೆ ಅಭಿಯಾನ ಉತ್ತಮ ಕ್ರಮ. ಲಸಿಕೆ ತೆಗೆದುಕೊಂಡಿರುವವರೂ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಪ್ರಾಣ ಉಳಿಸಲು ನಾವು ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚು ಹೊರೆ ಬೀಳುವುದನ್ನು ತಡೆಯಬೇಕು. ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚು ಹೊರೆ ಬಿದ್ದರೆ ಕೋವಿಡ್‌–19 ಸಂಬಂಧಿ ಸಾವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು