ಬುಧವಾರ, ಸೆಪ್ಟೆಂಬರ್ 29, 2021
20 °C

ತಾಲಿಬಾನ್‌: ಆಗ ಕೈದಿಗಳಾಗಿದ್ದವರು ಈಗ ಅದೇ ಜೈಲಿನ ಉಸ್ತುವಾರಿಗಳು!

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗನ್‌ ಸರ್ಕಾರದಿಂದ ಬಂಧಿಸಲ್ಪಟ್ಟ ಸಾವಿರಾರು ತಾಲಿಬಾನ್‌ ಉಗ್ರರನ್ನು ಇರಿಸಲಾಗಿದ್ದ ಕಾಬೂಲ್‌ನ ಮುಖ್ಯ ಕಾರಾಗೃಹ ಪುಲ್-ಎ-ಚರ್ಕಿ, ಈಗ ತಾಲಿಬಾನ್‌ ಹಿಡಿತದಲ್ಲಿದೆ.

ಅಫ್ಗಾನಿಸ್ತಾನ ತಾಲಿಬಾನ್‌ ಕೈವಶವಾದ ಬಳಿಕ ಪುಲ್-ಎ-ಚರ್ಕಿ ಕಾರಾಗೃಹದ ಎಲ್ಲಾ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲಿನ ಸರ್ಕಾರಿ ಅಧಿಕಾರಿಗಳು ಪರಾರಿಯಾದರು. ಸದ್ಯ ಈ ಕಾರಾಗೃಹವನ್ನು ತಾಲಿಬಾನಿಗಳೇ ನಿರ್ವಹಿಸುತ್ತಿದ್ದಾರೆ.

ತನ್ನ ಸ್ನೇಹಿತರೊಂದಿಗೆ ಪುಲ್-ಎ-ಚರ್ಕಿ ಜೈಲಿಗೆ ಭೇಟಿ ನೀಡಿದ ಹೆಸರು ಹೇಳಲು ಇಚ್ಛಿಸಿದ ತಾಲಿಬಾನ್‌ ಕಮಾಂಡರ್‌ ಒಬ್ಬ, ಎಪಿ ವರದಿಗಾರರೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

‘ಒಂದು ದಶಕದ ಹಿಂದೆ ನನ್ನನ್ನು ಪೂರ್ವ ಕುನಾರ್ ಪ್ರಾಂತ್ಯದಲ್ಲಿ ಬಂಧಿಸಿ, ಪುಲ್-ಎ-ಚರ್ಕಿ ಕಾರಾಗೃಹಕ್ಕೆ ಕರೆತರಲಾಗಿತ್ತು. ಆ ದಿನಗಳನ್ನು ನೆನಪಿಸಿಕೊಂಡರೆ ತುಂಬಾ ಭಯವಾಗುತ್ತದೆ. ನಮ್ಮನ್ನು ನಿಂದಿಸಲಾಗುತ್ತಿತ್ತು. ಕಿರುಕುಳ ನೀಡಲಾಗುತ್ತಿತ್ತು. ನಾನು ಈ ಜೈಲಿನಲ್ಲಿ ಸುಮಾರು 14 ತಿಂಗಳ ಕಾಲ ಇದ್ದೆ. ಅದು ನನ್ನ ಜೀವನದ ಕರಾಳ ದಿನಗಳಾಗಿವೆ. ಈಗಿನದು ತುಂಬಾ ಖುಷಿಯ ದಿನಗಳಾಗಿವೆ. ನಾನೀಗ ಸ್ವತಂತ್ರನಾಗಿದ್ದೇನೆ. ಯಾವುದೇ ಭಯವಿಲ್ಲದೇ ಇಲ್ಲಿಗೆ ಬರಬಹುದು’ ಎಂದು  ಆತ ವರದಿಗಾರರಿಗೆ ತಿಳಿಸಿದ್ದಾನೆ.

11 ಸೆಲ್‌ ಬ್ಲಾಕ್‌ಗಳನ್ನು ಹೊಂದಿರುವ ಈ ಜೈಲಿನಲ್ಲಿ 5 ಸಾವಿರ ಕೈದಿಗಳನ್ನು ಇರಿಸಬಹುದಾಗಿದೆ. ಆದರೆ ಇಲ್ಲಿ 10 ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸಿದ ನಿದರ್ಶನ ಇದೆ. ಸಾವಿರಾರು ಸಂಖ್ಯೆಯಲ್ಲಿ ತಾಲಿಬಾನಿ ಕೈದಿಗಳೂ ಇಲ್ಲಿದ್ದರು. 1970 ಮತ್ತು 1980ರ ದಶಕದಲ್ಲಿ ಈ ಜೈಲಿನಲ್ಲಿ ಸಾಮೂಹಿಕ ಗಲ್ಲು ಶಿಕ್ಷೆಗಳು ಆಗಿತ್ತು, ಅದಕ್ಕಾಗಿಯೇ ಸಾಮೂಹಿಕ ಗೋರಿಗಳನ್ನೂ ಇಲ್ಲಿ ನಿರ್ಮಿಸಲಾಗಿತ್ತು. 

ಸದ್ಯ ತಾಲಿಬಾನಿ ಕೈದಿಗಳೆಲ್ಲ ಬಂಧಮುಕ್ತರಾಗಿದ್ದಾರೆ. ಇಲ್ಲಿ ಕೇವಲ 60ರಷ್ಟು ಮಂದಿ ಕೈದಿಗಳಷ್ಟೇ ಇದ್ದಾರೆ. ಅವರೆಲ್ಲ ವಿವಿಧ ಅಪರಾಧ ಕೃತ್ಯಗಳಲ್ಲಿ ಶಾಮೀಲಾದವರು ಅಥವಾ ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿತರಾದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು