ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸ್ಫೋಟದಲ್ಲಿ ಭಾರತದ ಕೈವಾಡವಿದೆ ಎಂದ ಪಾಕಿಸ್ತಾನ: ವ್ಯಂಗ್ಯವಾಡಿದ ಭಾರತ

Last Updated 14 ಆಗಸ್ಟ್ 2021, 12:09 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಖೈಬರ್‌ ಪ್ರಾಂತ್ಯದ ದಾಸು ಎಂಬಲ್ಲಿ ಇತ್ತೀಚೆಗೆ ಸಂಭವಿಸಿದ ಬಸ್‌ ಸ್ಫೋಟ ಪ್ರಕರಣಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂಬ ಸ್ಪಷ್ಟನೆಯನ್ನು ಪಾಕಿಸ್ತಾನ ನಿರಾಕರಿಸಿದೆ. ದಾಳಿಯಲ್ಲಿ ಭಾರತದ ಪಾತ್ರವಿದೆ ಎಂದು ಅದು ಪ್ರತಿಪಾದಿಸಿದೆ.

ಕಳೆದ ತಿಂಗಳು ಕೊಹಿಸ್ತಾನ್ ಜಿಲ್ಲೆಯ ದಾಸು ಎಂಬಲ್ಲಿ ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ ಒಂಬತ್ತು ಚೀನೀ ಎಂಜಿನಿಯರ್‌ಗಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಘಟನೆ ಬಗ್ಗೆ ಪಾಕಿಸ್ತಾನವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು.

ತನಿಖೆಯ ಮುಕ್ತಾಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ, ‘ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ಆರ್ ಆ್ಯಂಡ್‌ ಎಡಬ್ಲ್ಯೂ) ಮತ್ತು ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ (ಎನ್‌ಡಿಎಸ್) ದಾಳಿ ನಡೆಸಿದೆ,’ ಎಂದು ಆರೋಪಿಸಿದರು.

ಬಾಂಬ್ ಸ್ಫೋಟದಲ್ಲಿ ಭಾರತೀಯ ಗುಪ್ತಚರ ಇಲಾಖೆಯ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಗಳು ’ಸುಳ್ಳು’ ಎಂದು ಭಾರತ ಶುಕ್ರವಾರ ಹೇಳಿತ್ತು. ಅಲ್ಲದೆ, ಇದು ಪ್ರಾದೇಶಿಕ ಅಸ್ಥಿರತೆಯ ಕೇಂದ್ರಬಿಂದುವಾಗಿರುವ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಜಾಗ ಒದಗಿಸಿಕೊಟ್ಟಿರುವ ಪಾಕಿಸ್ತಾನದಿಂದ ಜಾಗತಿಕ ಗಮನ ಸೆಳೆಯುವ ಕುತಂತ್ರ ಎಂದು ಭಾರತ ಹೇಳಿತ್ತು.

‘ಈ ಆರೋಪಗಳು, ಭಾರತವನ್ನು ನಿಂದಿಸುವ ಪಾಕಿಸ್ತಾನದ ಮತ್ತೊಂದು ಪ್ರಯತ್ನವಷ್ಟೇ,‘ ಎಂದು ಭಾರತ ಪ್ರತಿಪಾದಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ‘ದಾಸು ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವನ್ನು ನಿರಾಕರಿಸಿರುವ ಭಾರತೀಯ ವಿದೇಶಾಂಗ ಇಲಾಖೆಯ, ಅಸಂಬದ್ಧ ಟೀಕೆಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ‘ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT