ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್‌ನಿರ್ಮಾಣಗೊಂಡ ದೇಗುಲ ಉದ್ಘಾಟಿಸಿದ ಪಾಕ್‌ ಮುಖ್ಯನ್ಯಾಯಮೂರ್ತಿ ಗುಲ್ಜಾರ್‌

Last Updated 9 ನವೆಂಬರ್ 2021, 7:38 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಕರಕ್, ಖೈಬರ್-ಫಕ್ತುನ್‌ಕ್ವಾ (ಕೆಪಿ) ಪ್ರದೇಶದಲ್ಲಿ ಪುನರ್‌ನಿರ್ಮಾಣ ಮಾಡಲಾದ ಶ್ರೀ ಪರಮಹಂಸಜೀ ಮಹಾರಾಜ್ ದೇವಾಲಯವನ್ನು ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಗುಲ್ಜಾರ್ ಅಹ್ಮದ್ ಅವರು ಉದ್ಘಾಟಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರು ಹಿಂದೂ ಸಮುದಾಯವನ್ನು ಅಭಿನಂದಿಸಿದ್ದಾರೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಥಳೀಯ ಧರ್ಮಗುರುಗಳು ಮತ್ತು ಇತರರ ನೇತೃತ್ವದ ಗುಂಪೊಂದು ದೇವಾಲಯದ ಮೇಲೆ ದಾಳಿ ಮಾಡಿ ಅದನ್ನು ಸಂಪೂರ್ಣವಾಗಿ ಕೆಡವಿತ್ತು.

ಸೋಮವಾರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಗುಲ್ಜಾರ್, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಬದ್ಧವಾಗಿದೆ. ಈ ಬದ್ಧತೆ ಭವಿಷ್ಯದಲ್ಲಿಯೂ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನದ ಸಂವಿಧಾನದ ಪ್ರಕಾರ ಬೇರೆಲ್ಲ ಸಮುದಾಯಗಳಂತೆ ಹಿಂದೂಗಳಿಗೂ ಸಮಾನ ಹಕ್ಕುಗಳಿವೆ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಧಾರ್ಮಿಕ ಪವಿತ್ರ ಸ್ಥಳಗಳನ್ನು ಗೌರವಿಸುತ್ತಾರೆ. ಯಾರ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಸಿಜೆಪಿ ತಿಳಿಸಿದರು.

ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಭರವಸೆಯ ವಾಗ್ದಾನವನ್ನು ಸುಪ್ರೀಂ ಕೋರ್ಟ್ ನೀಡುತ್ತದೆ. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಸಂವಿಧಾನದ ಅಡಿಯಲ್ಲಿ ಎಲ್ಲರ ಕರ್ತವ್ಯವೂ ಆಗಿದೆ ಎಂದು ಅವರು ಹೇಳಿದರು.

ಕರಕ್‌ನಲ್ಲಿ ನಡೆದ ದೇಗುಲ ಧ್ವಂಸ ಘಟನೆಯತ್ತ ಸಕಾಲಕ್ಕೆ ಗಮನಿಸಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪಾಕಿಸ್ತಾನದ ಹಿಂದೂ ಕೌನ್ಸಿಲ್‌ನ ಪೋಷಕ ಮತ್ತು ಪಿಟಿಐ ಮುಖಂಡ ರಮೇಶ್ ಕುಮಾರ್ ಇದೇ ವೇಳೆ ತಿಳಿಸಿದರು.

ಪಾಕಿಸ್ತಾನದಲ್ಲಿರುವ ಐತಿಹಾಸಿಕ ದೇವಾಲಯಗಳನ್ನು ಪುನರಾರಂಭಿಸಿದರೆ, ಸಾವಿರಾರು ಹಿಂದೂಗಳು ಅವುಗಳಿಗೆ ಭೇಟಿ ನೀಡುತ್ತಾರೆ. ಇದು ವಿಶ್ವ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದೆ ಎಂದು ಕುಮಾರ್ ಇದೇ ವೇಳೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT