ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತಾರ್‌ಪುರ ಕಾರಿಡಾರ್ ನಿರ್ಮಾಣವೇಕೆ: ಲಾಹೋರ್‌ ಹೈಕೋರ್ಟ್‌ ಪ್ರಶ್ನೆ

Last Updated 16 ಅಕ್ಟೋಬರ್ 2020, 11:21 IST
ಅಕ್ಷರ ಗಾತ್ರ

ಲಾಹೋರ್‌: ಪಂಜಾಬ್‌ ಪ್ರಾಂತ್ಯದಲ್ಲಿ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣ ಮಾಡಿದ್ದೇಕೆ ಎಂದು ಲಾಹೋರ್‌ ಹೈಕೋರ್ಟ್‌ ಒಕ್ಕೂಟ ಸರ್ಕಾರವನ್ನು ಪ್ರಶ್ನಿಸಿದೆ.

‘ಈ ಯೋಜನೆ ಪ್ರಾಂತೀಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದಿಲ್ಲವೇ’ ಎಂದೂ ಹೈಕೋರ್ಟ್‌ ಕೇಳಿದೆ.

ಲಾಹೋರ್‌–ನರೋವಾಲ್‌ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಮುಹಮ್ಮದ್‌ ಕಾಸಿಮ್‌ ಖಾನ್‌, ‘ಲಾಹೋರ್‌–ನರೋವಾಲ್‌ ರಸ್ತೆ ನಿರ್ಮಿಸುವ ಜವಾಬ್ಧಾರಿ ಒಕ್ಕೂಟ ಸರ್ಕಾರದ್ದೋ ಅಥವಾ ಪ್ರಾಂತೀಯ ಸರ್ಕಾರದ್ದೋ’ ಎಂದು ಪ್ರಶ್ನಿಸಿದರು.

‘ಈ ರಸ್ತೆಗೆ ಅನುದಾನ ಒದಗಿಸುವುದು ಒಕ್ಕೂಟ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂದು ಕಾನೂನು ಅಧಿಕಾರಿ ಹೈಕೋರ್ಟ್‌ ಗಮನಕ್ಕೆ ತಂದರು.

‘ಈ ರಸ್ತೆ ನಿರ್ಮಾಣ ಪ್ರಾಂತೀಯ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದಾದರೆ, ಪಂಜಾಬ್‌ ಪ್ರಾಂತ್ಯದ ಮೂಲಕ ಹಾಯ್ದುಹೋಗುವ ಕರ್ತಾರ್‌ಪುರ ಕಾರಿಡಾರ್‌ ಅನ್ನು ನಿರ್ಮಿಸಿ, ನಿರ್ವಹಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಏಕೆ ಮಾಡುತ್ತಿದೆ. ಸರ್ಕಾರಗಳು ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತವೆಯೋ ಅಥವಾ ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿವೆಯೋ’ ಎಂದು ನ್ಯಾಯಮೂರ್ತಿ ಖಾನ್‌ ಪ್ರಶ್ನಿಸಿದರು.

‘ಅಗತ್ಯವೆನಿಸಿದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದೂ ಅವರು ಹೇಳಿದರು.

ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಹೆಚ್ಚುವರಿ ಅಟಾರ್ನಿ ಜನರಲ್‌ ಅವರಿಗೆ ಸೂಚಿಸಿದ ನ್ಯಾಯಮೂರ್ತಿ ಖಾನ್‌, ವಿಚಾರಣೆಯನ್ನು ಎರಡು ವಾರ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT