ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಾಹಿಯೇ ಸ್ಫೂರ್ತಿ: ಬೈಡನ್‌ ಮುಂದೆ ಮನದಾಳದ ಮಾತು ಬಿಚ್ಚಿಟ್ಟ ಸ್ವಾತಿ ಮೋಹನ್‌

ಸ್ಟಾರ್‌ ಟ್ರೆಕ್‌
Last Updated 5 ಮಾರ್ಚ್ 2021, 7:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ನಾನು ಮಗುವಾಗಿದ್ದಾಗ ಸ್ಟಾರ್‌ ಟ್ರೆಕ್‌ ಧಾರಾವಾಹಿ ನೋಡುತ್ತಿದ್ದೆ. ಬಾಹ್ಯಾಕಾಶ ಸಂಶೋಧನೆಯ ಆಕರ್ಷಣೆಗೆ ಒಳಗಾಗಲು ಈ ಧಾರಾವಾಹಿಯೇ ಸ್ಫೂರ್ತಿ’ ಎಂದು ಏರೋಸ್ಪೇಸ್‌ ಎಂಜಿನಿಯರ್‌ ಸ್ವಾತಿ ಮೋಹನ್‌ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಜತೆ ನಡೆದ ವರ್ಚುವಲ್‌ ಸಮಾಲೋಚನೆ ಸಂದರ್ಭದಲ್ಲಿ ಸ್ವಾತಿ ಮೋಹನ್‌ ಅವರು ಬಾಹ್ಯಾಕಾಶ ಲೋಕಕ್ಕೆ ಸಂಬಂಧಿಸಿದ ತಮ್ಮ ಅನುಭಗಳನ್ನು ಬಿಚ್ಚಿಟ್ಟಿದ್ದಾರೆ.

‘ಬಾಹ್ಯಾಕಾಶದ ದೃಶ್ಯಗಳು ಅದ್ಭುತವಾಗಿದ್ದವು. ಇಂತಹ ದೃಶ್ಯಗಳೇ ಬಾಹ್ಯಾಕಾಶದ ಬಗ್ಗೆ ಕುತೂಹಲ ಮೂಡಿಸಿದ್ದವು. ಅಲ್ಲಿನ ಹೊಸ ವಿಷಯಗಳು ಮತ್ತು ಅಲ್ಲಿರುವ ಅಸ್ತಿತ್ವದ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವ ಛಲ ಮೂಡತೊಡಗಿತು’ ಎಂದು ಸ್ವಾತಿ ಮೋಹನ್‌ ತಿಳಿಸಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಕಳುಹಿಸಿದ್ದ ‘ಪರ್ಸಿವಿಯರೆನ್ಸ್‌’ ರೋವರ್‌ ನೌಕೆಯು ಯಶಸ್ವಿಯಾಗಿ ಫೆಬ್ರುವರಿ 18ರಂದು ಮಂಗಳನ ಅಂಗಳದಲ್ಲಿ ಇಳಿದಿತ್ತು. ಈ ಯಶಸ್ವಿ ಕಾರ್ಯಾಚರಣೆಗೆ ಶ್ರಮಿಸಿದ ‘ನಾಸಾ’ ತಂಡದಲ್ಲಿ ಸ್ವಾತಿ ಮೋಹನ್‌ ಸಹ ಇದ್ದರು. ಪರ್ಸಿವಿಯರೆನ್ಸ್‌ ನೌಕೆಯ ನೆಲಸ್ಪರ್ಶ ಕಾರ್ಯಾಚರಣೆಯ ನಿರ್ದೇಶನ, ಪಥನಿರ್ದೇಶನ ಮತ್ತು ನಿಯಂತ್ರಣ ಕಾರ್ಯಾಚರಣೆ ತಂಡದ ಮುಖ್ಯಸ್ಥರಾಗಿದ್ದಾರೆ. ಪರ್ಸಿವಿಯರೆನ್ಸ್ ರೋವರ್ ನೌಕೆ ಮಂಗಳನ ನೆಲವನ್ನು ಸ್ಪರ್ಶಿಸಿದೆ ಎಂದು ಸ್ವಾತಿ ಮೋಹನ್‌ ಅವರೇ ಮೊದಲು ದೃಢಪಡಿಸಿದ್ದರು.

‘ಪರ್ಸಿವಿಯರೆನ್ಸ್‌ ನಾನು ಕೈಗೊಂಡ ಮೊದಲ ಕಾರ್ಯಾಚರಣೆಯಾಗಿತ್ತು. ಕಾರ್ಯಾಚರಣೆ ಕೈಗೊಳ್ಳುವ ಕೊನೆಯ ದಿನಗಳು ಸುಗಮವಾಗಿದ್ದವು. ಆದರೂ, ಒಂದು ರೀತಿಯ ಆತಂಕ ಮೂಡಿತ್ತು. ಕೊನೆಯ ಏಳು ನಿಮಿಷಗಳಂತೂ ರೋಚಕತೆ ಮತ್ತು ಕುತೂಹಲದಿಂದ‌ ಕೂಡಿದ್ದವು’ ಎಂದು ಸ್ವಾತಿ ಮೋಹನ್‌ ವಿವರಿಸಿದ್ದಾರೆ.

‘ನಾಸಾ’ ತಂಡದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಜೋ ಬೈಡನ್‌, ‘ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆಯಿಂದಾಗಿ ವೈಜ್ಞಾನಿಕ ಕ್ಷೇತ್ರದಲ್ಲಿನ ನಾಯಕತ್ವಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಈ ಸಾಧನೆ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನೀವು ಲಕ್ಷಾಂತರ ಯುವಕರು ಮತ್ತು ಮಕ್ಕಳಿಗೆ ಹೊಸ ಕನಸುಗಳನ್ನು ಕಾಣುವಂತೆ ಮಾಡಿದ್ದೀರಿ. ಅಮೆರಿಕದ ಜನರಲ್ಲಿ ಹೊಸ ಉತ್ಸಾಹ ಮೂಡಿಸಿರುವುದಕ್ಕೆ ನಿಮಗೆ ಅಭಿನಂದನೆಗಳು’ ಎಂದು ಬೈಡನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT