ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರು ಅಧ್ಯಕ್ಷೀಯ ಚುನಾವಣೆ: ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಜಯಭೇರಿ

Last Updated 20 ಜುಲೈ 2021, 6:10 IST
ಅಕ್ಷರ ಗಾತ್ರ

ಲಿಮ: ದಕ್ಷಿಣ ಅಮೆರಿಕದ ಪೆರು ರಾಷ್ಟ್ರದ ಅಧ್ಯಕ್ಷರಾಗಿ ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಆಯ್ಕೆಯಾಗಿದ್ದಾರೆ. 40 ವರ್ಷಗಳಲ್ಲೇ ಸುದೀರ್ಘವಾದ ಮತ ಎಣಿಕೆ ಪ್ರಕ್ರಿಯೆ ನಡೆದು ಸೋಮವಾರ ಅಧಿಕೃತ ಫಲಿತಾಂಶ ಪ್ರಕಟವಾಗಿದೆ.

ಎಡಪಂಥೀಯ ನಾಯಕ ಪೆಡ್ರೊ ಕಾಸ್ಟಿಯೊ (51) ಅವರಿಗೆ ಬಡವರು ಮತ್ತು ಗ್ರಾಮೀಣ ಭಾಗದ ಜನರ ಬೆಂಬಲ ದೊರೆತಿದ್ದು, ಬಲಪಂಥೀಯ ರಾಜಕಾರಣಿ ಫ್ಯೂಜಿಮೊರಿ ಅವರನ್ನು 44,000 ಮತಗಳ ಅಂತರದಿಂದ ಮಣಿಸಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯ ನಡೆದ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯ ಅಂತಿಮ ಫಲಿತಾಂಶ ಸೋಮವಾರ ಹೊರ ಬಂದಿದೆ.

ಪೆನ್ಸಿಲ್‌ ಚಿಹ್ನೆಯನ್ನು ಹೊಂದಿರುವ 'ಫ್ರೀ ಪೆರು ನ್ಯಾಷನಲ್‌ ಪೊಲಿಟಿಕಲ್‌ ಪಾರ್ಟಿಯ' ಪೆಡ್ರೊ ರಾಷ್ಟ್ರದಾದ್ಯಂತ 'ಸಿರಿವಂತ ರಾಷ್ಟ್ರದಲ್ಲಿ ಇನ್ನು ಮುಂದೆ ಬಡವರಿಲ್ಲ' ಎಂಬ ಘೋಷವಾಕ್ಯ ಪ್ರಚುರ ಪಡಿಸಿದ್ದಾರೆ.

'ಫ್ರೀ ಪೆರು ನ್ಯಾಷನಲ್‌ ಪೊಲಿಟಿಕಲ್‌ ಪಾರ್ಟಿಯ' ಗುರುತು ಪೆನ್ಸಿಲ್‌
'ಫ್ರೀ ಪೆರು ನ್ಯಾಷನಲ್‌ ಪೊಲಿಟಿಕಲ್‌ ಪಾರ್ಟಿಯ' ಗುರುತು ಪೆನ್ಸಿಲ್‌

ಜಗತ್ತಿನ ಎರಡನೇ ಅತಿ ದೊಡ್ಡ ತಾಮ್ರ ಉತ್ಪಾದಕ ರಾಷ್ಟ್ರವಾಗಿರುವ ಪೆರು, ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹತ್ತಾರು ವರ್ಷಗಳ ದುಡಿಮೆಯು ಕೋವಿಡ್‌ ಪರಿಸ್ಥಿತಿಯಲ್ಲಿ ಕರಗಿ ಹೋಗಿದ್ದು, ಬಡತನದ ಪ್ರಮಾಣ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಾಗಿದೆ.

ಗಣಿಗಾರಿಕೆ ವಲಯದಿಂದ ಸಂಗ್ರಹವಾಗುವ ಆದಾಯವನ್ನು ಬಳಸಿ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ಉನ್ನತೀಕರಿಸುವುದಾಗಿ ಪೆಡ್ರೊ ಕ್ಯಾಸ್ಟಿಯೊ ಭರವಸೆ ನೀಡಿದ್ದಾರೆ.

'ಯಾರಲ್ಲಿ ಒಂದು ಕಾರು ಇಲ್ಲವೋ ಅವರ ಬಳಿ ಒಂದು ಸೈಕಲ್‌ ಆದರೂ ಇರಬೇಕು' ಎಂದು ಪೆಡ್ರೊ ಈ ಹಿಂದೆ ಹೇಳಿದ್ದರು.

ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಅಧ್ಯಕ್ಷ ಆಲ್ಬರ್ಟೊ ಫ್ಯೂಜಿಮೊರಿ ಅವರ ಮಗಳು ಫ್ಯೂಜಿಮೊರಿ ಮೂರನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರು.

ಪೆಡ್ರೊ ಅವರು ಕಳೆದ 25 ವರ್ಷಗಳು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಬ್ಬರ್‌ ಚಪ್ಪಲಿ ಮತ್ತು ತಲೆಗೆ ಬಿಳಿಯ ಟೊಪ್ಪಿ ತೊಟ್ಟು ಚುನಾವಣೆ ಪ್ರಚಾರ ನಡೆಸಿದರು. ಶಿಕ್ಷಕರಿಗೆ ಉತ್ತಮ ವೇತನಕ್ಕೆ ಆಗ್ರಹಿಸಿ 2017ರಲ್ಲಿ ಅವರು ಶಿಕ್ಷಕರ ಅತಿ ದೊಡ್ಡ ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರಿಕೆಗಾಗಿ ಸಂಪುಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT